ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ

4-pnp 1
ಪಾಂಡವಪುರ ತಾಲೂಕಿನ ತಾಳಶಾಸನ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಪಂ ಸಿಇಒ ಶಾಂತ ಹುಲ್ಮನಿ, ಗ್ರಾಪಂ ಅಧ್ಯಕ್ಷೆ ಮಹದೇವಮ್ಮ ಇದ್ದರು.
Published on

ಪಾಂಡವಪುರ: ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕು. ತಾಲೂಕು ಕಚೇರಿಯಲ್ಲಿನ ದೋಷಪೂರಿತ ಆಡಳಿತ ವಿರುದ್ಧ ಕ್ರಮ, ಪೊಲೀಸ್ ಇಲಾಖೆಯಲ್ಲಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಅವರಿಗೆ ಗ್ರಾಮಸ್ಥರು ಮನವಿ ಮಾಡಿದರು.

ತಾಲೂಕಿನ ತಾಳಶಾಸನ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಡಿಸಿ ಗೋಪಾಲಕೃಷ್ಣ ಅವರಿಗೆ ಸ್ಥಳೀಯರು ಹಲವು ಸಮಸ್ಯೆಗಳನ್ನು ಮನದಟ್ಟು ಮಾಡಿಕೊಟ್ಟು ಪರಿಹಾರ ಒದಗಿಸುವಂತೆ ವಿನಂತಿಸಿದರು.
ಗ್ರಾಮದ ಪ್ರಮುಖ ರಸ್ತೆಗಳು ಹಾಳಾಗಿದ್ದು, ರೈತರು ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ತೊಂದರೆಯಾಗುತ್ತಿದೆ. ಕನಿಷ್ಠ ಕಾಲ್ನಡಿಗೆಯಲ್ಲೂ ಸಂಚರಿಸಲು ಸಾಧ್ಯವಿಲ್ಲದಷ್ಟು ಹಾಳಾಗಿವೆ. ಹೀಗಾಗಿ ಗ್ರಾಮದ ರಸ್ತೆಗಳನ್ನು ಪರಿಶೀಲಿಸಿ ಡಾಂಬರೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ವಿದ್ಯುತ್ ಬಿಲ್ ಬಾಕಿ ವಸೂಲಿ ಮಾಡದಂತೆ ಸೆಸ್ಕ್ ಇಲಾಖೆಗೆ ನಿರ್ದೇಶನ ನೀಡಬೇಕು. ಉಪವಿಭಾಗಾಧಿಕಾರಿಗೆ ಕನ್ನಡ ಭಾಷೆ ತಿಳಿದಿಲ್ಲ. ಇದರಿಂದ ರೈತರೊಂದಿಗೆ ಸಂವಾದ ನಡೆಸಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸಾಧ್ಯವಾಗದೆ ಕಡತಗಳು ಬಾಕಿ ಉಳಿದಿದ್ದು, ರೈತರಿಗೆ ಸಮಸ್ಯೆಯಾಗುತ್ತಿದೆ ಎಂದು ರೈತರು ದೂರು ನೀಡಿದರು.
ಕನಗಮಮರಡಿ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹ: ಕನಗನಮರಡಿ ಗ್ರಾಮದ ಬಳಿ ನಡೆಯುತ್ತಿರುವ ಗಣಿಗಾರಿಕೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಬದುಕು ದುಸ್ತರವಾಗಿದೆ. ಗಣಿಗಾರಿಕೆಯ ಧೂಳಿನಿಂದ ಬೆಳೆಗಳು ಹಾಳಾಗುತ್ತಿವೆ. ಮನೆಗಳು ಮತ್ತು ದೇವಸ್ಥಾನಗಳ ಗೋಡೆಗಳು ಬಿರುಕು ಬಿಟ್ಟಿವೆ. ಗಣಿಗಾರಿಕೆ ಪ್ರದೇಶದ 2 ಕಿಮೀ ವ್ಯಾಪ್ತಿಯಲ್ಲಿ 1.75 ಎಕರೆ ಪ್ರದೇಶಕ್ಕೆ ನೀರೊದಗಿಸುತ್ತಿರುವ ಲೋಕಪಾವನಿ ಮೇಲ್ಗಾಲುವೆ ಮತ್ತು ವಿಶ್ವೇಶ್ವರಯ್ಯ ಸುರಂಗ ನಾಲೆ ಇದೆ. ಗಣಿಗಾರಿಕೆಯಿಂದ ಇದಕ್ಕೆ ಅಪಾಯ ಸಂಭವಿಸಿದರೆ ಇದರ ಮೇಲೆ ಅವಲಂಬಿತರಾಗಿರುವ ರೈತರ ಬದುಕು ಬೀದಿಗೆ ಬೀಳಲಿದೆ ಎಂದು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟರು.
ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ: ಪೊಲೀಸರು ಗಣಿ ಮಾಲೀಕರನ್ನು ರಕ್ಷಿಸುವ ಸಲುವಾಗಿ ರೈತರ ವಿರುದ್ಧ ಸುಮಾರು 16ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ರೌಡಿ ಶೀಟರ್ ತೆರೆಯಲಾಗಿದೆ. ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ್ದಕ್ಕೆ ನಾವು ಪೊಲೀಸರ ಕಣ್ಣಿಗೆ ರೌಡಿಗಳಂತೆ ಕಾಣುತ್ತಿದ್ದೇವೆ. ಗಣಿ ಮಾಲೀಕರ ಅಣತಿಯಂತೆ ವರ್ತಿಸುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾವು ಪ್ರಾಣ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ರೈತರು ಹೇಳಿದರು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾತನಾಡಿ, ತಾಲೂಕು ಕಚೇರಿಯಲ್ಲಿ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ಹಿಂದಿನ ತಹಸೀಲ್ದಾರ್ ರಜೆಯಲ್ಲಿದ್ದು ಸರ್ಕಾರ ಮತ್ತೊಬ್ಬರನ್ನು ನೇಮಿಸಿ ಆದೇಶ ಹೊರಡಿಸಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ನಡೆಸುತ್ತದೆ ಎಂದರು.
ತಾಲೂಕಿನ ಕನಗನಮರಡಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಗಣಿ ಮಾಲೀಕರು ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಪಡೆದು ನಂತರ ಪರವಾನಗಿ ಪಡೆದುಕೊಂಡಿದ್ದಾರೆ. ಈಗಾಗಲೇ ಕೆಆರ್‌ಎಸ್ ಅಣೆಕಟ್ಟೆ ವ್ಯಾಪ್ತಿಯ 20 ಕಿಮೀ ಅಂತರದಲ್ಲಿ ಗಣಿಗಾರಿಕೆಯನ್ನು ನಿಷೇಧಿಸಲಾಗಿದ್ದು, ಇದರ ವ್ಯಾಪ್ತಿಗೆ ಬರುವುದಾದರೆ ಕ್ರಮ ವಹಿಸಲಾಗುವುದು. ರೈತರು, ಅಧಿಕಾರಿಗಳು, ಪೊಲೀಸರು ಗಣಿ ಮಾಲೀಕರು ಒಳಗೊಂಡಂತೆ ಎಲ್ಲರ ಸಮ್ಮುಖದಲ್ಲಿ ತಿಂಗಳಾಂತ್ಯದಲ್ಲಿ ಡ್ರೋನ್ ಸರ್ವೇ ನಡೆಸಲಾಗುವುದು. ಫೆ.15 ಅಥವಾ 16 ರಂದು ಗಣಿಗಾರಿಕೆ ಪ್ರದೇಶಕ್ಕೆ ತೆರಳಿ ಖುದ್ದು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಂತಾ ಎಲ್.ಹುಲ್ಮನಿ ಮಾತನಾಡಿ, ಗ್ರಾಮ ಪಂಚಾಯಿತಿಯಿಂದ ಸ್ವಚ್ಛತೆಗೆ ಆದ್ಯತೆ ನೀಡಿ ಸ್ವಚ್ಛ ಶನಿವಾರ ಆಚರಿಸಲಾಗುತ್ತಿದೆ. ಕಸ ಸಂಗ್ರಹಿಸುವ ವಾಹನದ ಚಾಲಕರನ್ನಾಗಿ ಮಹಿಳೆಯರು ನೇಮಕಗೊಂಡಿದ್ದು, ಅವರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ನರೇಗಾ ಯೋಜನೆಯಡಿ ದೊಡ್ಡಬ್ಯಾಡರಹಳ್ಳಿಯಲ್ಲಿ ಆಟದ ಮೈದಾನ, ಶೌಚಗೃಹ, ಡಿಜಿಟಲ್ ಗ್ರಂಥಾಲಯ, ಚರಂಡಿ ಸೇರಿದಂತೆ ಅನೇಕ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕು ಆಡಳಿತದಿಂದ ವಿಧವಾ ವೇತನ, ಮನಸ್ವಿನಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾಯಿ ಕಾರ್ಡ್, ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಭಾಗ್ಯಲಕ್ಷ್ಮೀ ಮತ್ತು ಸುಕನ್ಯಾ ಬಾಂಡ್ ವಿತರಣೆ, ಕೃಷಿ, ತೋಟಗಾರಿಕೆ ಇಲಾಖೆಗಳಿಂದ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು. ಮಕ್ಕಳಿಗೆ ಅನ್ನಪ್ರಾಶನ, ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉಪವಿಭಾಗಾಧಿಕಾರಿ ನೋಗ್ಜಾಯ್ ಮಹಮ್ಮದ್ ಅಲಿ ಅಕ್ರಮ್ ಶಾ, ತಾಪಂ ಇಒ ಲೋಕೇಶ್‌ಮೂರ್ತಿ, ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಎಂ.ಆರ್.ಲವ, ಸುಮಾರಾಣಿ, ಗ್ರೇಡ್-2 ತಹಸೀಲ್ದಾರ್ ವರುಣ್, ಕಂದಾಯ ನಿರೀಕ್ಷಕರಾದ ಶಂಕರ್, ಮಹದೇವಸ್ವಾಮಿ, ಶಿವಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net