

ಜಗದೀಶ ಹೊಂಬಳಿ ಬೆಳಗಾವಿ
ರಾಜ್ಯಾದ್ಯಂತ ಮಾರ್ಚ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ. ಪರೀಕ್ಷೆಯಲ್ಲಿ ಅಕ್ರಮಗಳ ತಡೆಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಪಾರದರ್ಶಕ ಪರೀಕ್ಷೆಗೆ ಮತ್ತಷ್ಟು ಬಲ ತುಂಬಲಿದೆ.
ಪರೀಕ್ಷಾ ಕಾರ್ಯಗಳಿಗೆ ‘ಕರ್ನಾಟಕ ಸೆಕ್ಯೂರ್ಡ್ ಎಕ್ಸಾಮಿನೇಷನ್ ಸಿಸ್ಟಮ್’ ಅಡಿ ವ್ಯವಸ್ಥಿತವಾಗಿ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ.
ಸಿಟಿವಿ ಫುಟೇಜ್‌ಗಳನ್ನು ವೆಬ್ ಕಾಸ್ಟಿಂಗ್ ಮೂಲಕ ವೀಕ್ಷಣೆ ಮಾಡುವುದಕ್ಕೆ ಜಿಲ್ಲಾ ಪಂಚಾಯಿತಿ ಹಾಗೂ ಚಿಕ್ಕೋಡಿ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಕೇಂದ್ರಗಳ ಮೇಲೆ ಅಧಿಕಾರಿಗಳು ನಿಗಾವಹಿಸಲಿದ್ದಾರೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 41 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಇದರಲ್ಲಿ ಬೆಳಗಾವಿ ನಗರದಲ್ಲಿ 20 ಪರೀಕ್ಷಾ ಕೇಂದ್ರ ಹಾಗೂ ತಾಲೂಕುಗಳಲ್ಲಿ 21 ಪರೀಕ್ಷಾ ಕೇಂದ್ರಗಳಿವೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 55 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಇದರಲ್ಲಿ ಚಿಕ್ಕೋಡಿ ತಾಲೂಕಿನಲ್ಲಿ 05, ನಿಪ್ಪಾಣಿ 03, ಅಥಣಿ 10, ಕಾಗವಾಡದಲ್ಲಿ 04, ಗೋಕಾಕ 09, ಮೂಡಲಗಿ 05, ಹುಕ್ಕೇರಿ 08, ರಾಯಬಾಗ ತಾಲೂಕಿನಲ್ಲಿ 10 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಪ್ರಶ್ನೆ ಪತ್ರಿಕೆ ವಿತರಣೆಗೆ ಬೆಳಗಾವಿಯಲ್ಲಿ 11 ಮಾರ್ಗಾಧಿಕಾರಿಗಳ ತಂಡ ನೇಮಿಸಲಾಗಿದೆ. ಚಿಕ್ಕೋಡಿಯಲ್ಲಿ 15 ಮಾರ್ಗಾಧಿಕಾರಿಗಳ ತಂಡ ರಚಿಸಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಭದ್ರತೆಗೆ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
54,662 ವಿದ್ಯಾರ್ಥಿಗಳ ನೋಂದಣಿ: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 54,662 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 23,457 ವಿದ್ಯಾರ್ಥಿಗಳು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 31,205 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದರಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ರೆಗ್ಯುಲರ್ 21,518, ಖಾಸಗಿ 639, ಪುನರಾವರ್ತಿತ 1,288 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 7,326, ವಾಣಿಜ್ಯ ವಿಭಾಗದಲ್ಲಿ 6,597 ಹಾಗೂ ಕಲಾ ವಿಭಾಗದಲ್ಲಿ 7,595 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 29,222 ರೆಗ್ಯುಲರ್ ವಿದ್ಯಾರ್ಥಿಗಳು, 1,078 ಖಾಸಗಿ ವಿದ್ಯಾರ್ಥಿಗಳು, 894 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ವಿಜ್ಞಾನ ವಿಭಾಗದಲ್ಲಿ 10,120, ಕಲಾ 13,980, ವಾಣಿಜ್ಯ ವಿಭಾಗದ 7,105 ವಿದ್ಯಾರ್ಥಿಗಳಿದ್ದಾರೆ. ಎರಡೂ ಶೈಕ್ಷಣಿಕ ಜಿಲ್ಲೆಯಲ್ಲಿ ಕ್ರಮವಾಗಿ 12 ಹಾಗೂ 11 ವಿದ್ಯಾರ್ಥಿಗಳು ಇಂಪ್ರೂಮೆಂಟ್‌ಗಾಗಿ ಪರೀಕ್ಷೆ ಬರೆಯಲಿದ್ದಾರೆ.
ನಿರ್ವಹಣೆಗೆ ತ್ರಿ ಸದಸ್ಯರ ನೇಮಕ: ಬೆಂಗಳೂರಿನಿಂದ ಬರುವ ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆ ಕಚೇರಿಯಲ್ಲಿ ಸುರಕ್ಷಿತವಾಗಿಟ್ಟು, ಪರೀಕ್ಷೆ ಸಂದರ್ಭದಲ್ಲಿ ಕೇಂದ್ರಗಳಿಗೆ ವಿತರಿಸುವುದಕ್ಕೆ ಪ್ರೊಬೆಷನರಿ ಜಿಲ್ಲಾಧಿಕಾರಿ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಜಿಲ್ಲಾ ಖಜಾನೆ ಉಪನಿರ್ದೇಶಕರನ್ನೊಳಗೊಂಡ ತ್ರಿ ಸದಸ್ಯರ ಸಮಿತಿ ರಚಿಸಲಾಗಿದೆ. ಚಿಕ್ಕೋಡಿ ಉಪ ಖಜಾನೆ ಕಚೇರಿಯಲ್ಲಿ ಪ್ರಶ್ನೆಪತ್ರಿಕೆಗಳನಿಟ್ಟು ಚಿಕ್ಕೋಡಿ ಉಪವಿಭಾಗಾಧಿಕಾರಿ, ಉಪ ಖಜಾನೆ ಸಹಾಯಕ ನಿರ್ದೇಶಕರು ಹಾಗೂ ಡಿಡಿಪಿಯು ನೇತೃತ್ವದ ತಂಡ ರಚಿಸಲಾಗಿದೆ.
ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಜೂನ್‌ನಿಂದ ಯೂನಿಟ್ ಟೆಸ್ಟ್ ಪರೀಕ್ಷೆ, ಸರಣಿ ಪರೀಕ್ಷೆ, ಪೂರ್ವ ಸಿದ್ಧತಾ ಪರೀಕ್ಷೆ, ಗುಂಪು ಚರ್ಚೆ, ಸೆಮಿನಾರ್‌ಗಳನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗಿದೆ. | ಎಂ.ಎಂ. ಕಾಂಬಳೆ ಡಿಡಿಪಿಯು, ಬೆಳಗಾವಿ