

ಕುಂದಾಣ: ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ವಲಯದ ಖನಿಜ ಆಡಳಿತ ಉಪನಿರ್ದೇಶಕಿ ಲಕ್ಷ್ಮಮ್ಮ ಎಚ್ಚರಿಕೆ ನೀಡಿದರು.
ತೈಲಗೆರೆ ಸರ್ವೇ ನಂ.110ರಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ತಂಡದೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಬಳಿಕ ಮಾತನಾಡಿದರು.
ಅಕ್ರಮ ಗಣಿಗಾರಿಕೆಗೆ ಅವಕಾಶವಿಲ್ಲ, ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ, ಗಣಿಗಾರಿಕೆಗೆ ಕೆಲವೊಂದು ನಿಯಮ ರೂಪಿಸಲಾಗಿದೆ. ಇಂಥ ನಿಯಮಗಳನ್ನು ಮೀರಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ದೂರು ಹಿನ್ನೆಲೆಯಲ್ಲಿ ಭೇಟಿ: ಕುಂದಾಣ ಹೋಬಳಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಮುದ್ದನಾಯಕನಹಳ್ಳಿ ಮತ್ತು ತೈಲಗೆರೆಯಲ್ಲಿ ಭಾರಿ ಗಾತ್ರದ ರಾಸಾಯನಿಕಗಳನ್ನು ಬಳಸಿ ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಇದರಿಂದಾಗಿ ಗಣಿ ಸುತ್ತಮುತ್ತಲ ಪ್ರದೇಶದ ಮನೆಗಳು ಬಿರುಕು ಬಿಟ್ಟಿವೆ. ರೈತರ ಬೆಳೆಗಳಿಗೂ ಸಾಕಷ್ಟು ಹಾನಿಯಾಗುತ್ತಿದೆ. ಆದ್ದರಿಂದ, ಇಲ್ಲಿನ ಚಟುವಟಿಕೆಗಳನ್ನು ಪರಿಶೀಲಿಸಿದ್ದೇವೆ ಎಂದರು.
ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದರು. ಸರ್ಕಾರದ ನಿಯಮ ಉಲ್ಲಂಸಿ ಗಣಿಗಾರಿಕೆ ವಾಡುವಂತಿಲ್ಲ ಎಂದು ಪುನರುಚ್ಚರಿಸಿದರು.
ಎಂಟಿಬಿ ಆದೇಶಕ್ಕೂ ಸ್ಪಂದಿಸಿಲ್ಲ: ಈ ಭಾಗದಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಸಾಕಷ್ಟು ದೂರು ನೀಡಿದ್ದರೂ ಯಾವುದೇ ಅಧಿಕಾರಿಯೂ ಇತ್ತ ಸುಳಿದಿಲ್ಲ, ಕಾಟಾಚಾರದ ಭೇಟಿಯಂತೆ ಬಂದು ಹೋಗುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳಗಳಿಗೆ ತಕ್ಷಣವೇ ಭೇಟಿ ನೀಡಿ ಪರಿಶೀಲಿಸಬೇಕು. ಅಂಥ ಪ್ರಕರಣಗಳು ಕಂಡುಬಂದಲ್ಲಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ರೇಣುಕಾ ದೇವಿ ಅವರಿಗೆ ಈ ಹಿಂದೆಯೇ ಆದೇಶ ನೀಡಿದ್ದರು. ಆದರೂ ರೇಣುಕಾದೇವಿ ಸ್ಪಂದಿಸಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದರು. ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯರ ವಿರುದ್ಧ ಮಾತಿನ ಚಕಮಕಿ ನಡೆಯಿತು. ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಅನುಸರಿಸಿದರೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು, ಗಣಿಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರದ ನಿಯಮಗಳನ್ನು ಉಲ್ಲಂಸುವಂತಿಲ್ಲ. ಈ ಬಗ್ಗೆ ಅಧಿಕಾರಿಗಳು ನಿಗಾ ಇಡಬೇಕು. ಆಗಾಗ ಸ್ಥಳ ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳಬೇಕು. ಎಂಟಿಬಿ ನಾಗರಾಜ್, ಜಿಲ್ಲಾ ಉಸ್ತುವಾರಿ ಸಚಿವ