

ಕೋಲಾರ: ನಿಜವಾದ ಕಲ್ಲುಕುಟುಕರಿಗೆ ತೊಂದರೆ ನೀಡುವುದು ಬೇಡ. ಅದೇ ರೀತಿ ಅಕ್ರಮ ಗಣಿಗಾರಿಕೆ ನಡೆಸುವವರಿಗೆ ರಕ್ಷಣೆ ಒದಗಿಸುತ್ತೇವೆ ಎಂದು ಸರ್ಕಾರ ನಡೆಸುವವರೇ ಕುಮ್ಮಕ್ಕು ನೀಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ತಿಳಿಸಿದರು.
ನಗರದ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಟೇಕಲ್ನ ಹುಣಸಿಕೋಟೆಯಲ್ಲಿ ಭಾನುವಾರ ಕಲ್ಲುಕುಟಿಕರ ಸಮಸ್ಯೆ ಆಲಿಸಲು ಆಯೋಜಿಸಿದ್ದ ಸಭೆಯಲ್ಲಿ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ ಹತ್ತಾರು ವರ್ಷಗಳಿಂದ ಬಂಡೆ, ದಿಂಡು ಕಲ್ಲು ಹೊಡೆಯುತ್ತಿರುವ ಬಡ ಕಲ್ಲು ಕುಟಿಕರ ಸಮಸ್ಯೆಗಳನ್ನು ಆಲಿಸದೆ ಅಕ್ರಮ ಕಲ್ಲುಗಣಿಗಾರಿಕೆ ನಡೆಸುವವರನ್ನು ತಡೆಯುವುದು ಬೇಡ ಎಂದು ಜಿಲ್ಲಾಡಳಿತಕ್ಕೆ ಸಲಹೆ ನೀಡಿರುವುದು ಸರಿಯಲ್ಲ. ಪರವಾನಗಿ ಇಲ್ಲದೆ, ರಾಜಧನ ಪಾವತಿಸದೆ ಯಂತ್ರಗಳನ್ನು ಬಳಸಿ ಕಲ್ಲುಗಣಿಗಾರಿಕೆ ಮಾಡುತ್ತಿರುವವರನ್ನು ತಡೆಯುವುದು ಬೇಡ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ವಿಂಗಡಿಸಿರುವ 113 ಬ್ಲಾಕ್ಗಳನ್ನು ಸೂಕ್ತ ದಾಖಲೆ ಒದಗಿಸಿದರೆ ಕೆಲಸ ಮಾಡುತ್ತಿರುವ ಸ್ಥಳವನ್ನು ನೈಜ ಕಲ್ಲುಕುಟುಕರಿಗೆ ಒದಗಿಸುವುದಾಗಿ ಜಿಲ್ಲಾಡಳಿತ ಭರವಸೆ ನೀಡಿರುವುದು ಸರಿಯಾಗಿದೆ. ಆದರೆ ಹಿಟಾಚಿ, ಲಾರಿ, ಟ್ರಾ$್ಯಕ್ಟರ್ಗಳಲ್ಲಿ ಲೋಡುಗಟ್ಟಲೆ ಕಲ್ಲುಗಳನ್ನು ರಾಜ್ಯ ಮತ್ತು ಅಂತಾರಾಜ್ಯಗಳಿಗೆ ಅಕ್ರಮವಾಗಿ ಸಾಗಿಸುವವರಿಗೆ, ಕ್ರಷರ್ಗಳಿಗೆ ನೂರಾರು ಲೋಡ್ ಕಲ್ಲು ಸಾಗಾಣಿಕೆ ಮಾಡುವವರಿಗೆ ರಕ್ಷಣೆ ಒದಗಿಸಲು ಅನುಕೂಲವಾಗುವಂತೆ ಜಿಲ್ಲಾಡಳಿತಕ್ಕೆ ರ್ನಿಬಂಧ ವಿಧಿಸುವುದು ಸರಿಯಲ್ಲ ಎಂದರು.
ಉಳಿ, ಸುತ್ತಿಗೆ, ಚಮಟಿಗೆ ಹೊಂದಿ ಮಳ್ಳುಗಿಡಗಳನ್ನು ತಂದು ಬಂಡೆ ಮೇಲೆ ಹಾಕಿ ಬೆಂಕಿ ಕಾಯಿಸಿ ಕಲ್ಲು ಕೀಳುವ ಬಡ ಕಲ್ಲುಕಟಿಕರ ಜ್ವಲಂತ ಸಮಸ್ಯೆಗಳನ್ನು ಸಚಿವ, ಸಂಸದರು ಆಲಿಸಬೇಕಿತ್ತು. ಅಂತಹವರ ಸಮಸ್ಯೆಗಳಿಗೆ ಸದನದ ಒಳಗೆ ಹೊರಗೆ ನಾನೂ ಸಹ ಧ್ವನಿಯಾಗಿ ಸಚಿವರ ಬೆಂಬಲಕ್ಕೆ ನಿಲ್ಲುತ್ತೇನೆ. ಕಲ್ಲು ಒಡೆದು ಒಪ್ಪತ್ತಿನ ಗಂಜಿ ಕುಡಿಯುವ ಸ್ಥಳಿಯರ ಸಮಸ್ಯೆಗಳನ್ನು ಜಲ್ಲಾಡಳಿತ ಪಟ್ಟಿ ಮಾಡಿ ಸರ್ಕಾರಕ್ಕೆ ಸಲ್ಲಿಸಲಿ. ಅದರ ಅನುಷ್ಠಾನಕ್ಕೆ ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ಪರವಾನಗಿ ಒದಗಿಸುವುದಕ್ಕೆ ನನ್ನ ಅಭ್ಯಂತರವಿಲ್ಲ. ಅದು ಬಿಟ್ಟು ಜಿಲ್ಲಾಡಳಿತವನ್ನು ಮುಂದಿಟ್ಟುಕೊಂಡು ಪಕ್ಷದ ಸಮಾರಂಭವನ್ನಾಗಿಸಿ, ಶಿಷ್ಠಾಚಾರ ಉಲ್ಲಂಘಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಟೇಕಲ್ ಸುತ್ತಮುತ್ತ ಹಿಟಾಚಿ, ಲಾರಿ, ಟ್ರಾ$್ಯಕ್ಟರ್ಗಳನ್ನು ಬಳಸಿ ನಿತ್ಯ ನೂರಾರು ಲೋಡ್ ಅಕ್ರಮವಾಗಿ ಕಲ್ಲು, ಜಲ್ಲಿ ಸಾಗಿಸಲಾಗುತ್ತಿದೆ. ನಾಡಿನ ನೆಲ, ಜಲ ಸಂರಕ್ಷಣೆ ಮಾಡುವುದಾಗಿ ಪ್ರಮಾಣವಚನ ಸ್ವೀಕರಿಸಿರುವ ಸಂಸದ, ಸಚಿವರು ಅಧಿಕಾರಿಗಳಿಗೆ ಅಕ್ರಮ ತಡೆಯಬಾರದೆಂದು ಎಚ್ಚರಿಕೆ ನೀಡುವುದು ಗೂಂಡಾ ರಾಜ್ಯಭಾರವಲ್ಲದೆ ಮತ್ತಿನ್ನೇನು? ಬಿಜೆಪಿ ಸರ್ಕಾರಕ್ಕೆ ತಾಕತ್ತಿದ್ದರೆ ಬಡಕಲ್ಲು ಕುಟಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಹಿತರಕ್ಷಣೆಗೆ ಕಾಯಿದೆ ಜಾರಿಗೆ ತರಲಿ. ಅದಕ್ಕೆ ನಮ್ಮ ಸಹಮತವಿರುತ್ತದೆ ಎಂದು ಹೇಳಿದರು.
ಗೂಂಡಾ ಸಂಸತಿ: ಎಂಟು ತಿಂಗಳಿಂದ ಜಿಪಂ ಸಭೆ ನಡೆಸದ ಉಸ್ತುವಾರಿ ಸಚಿವ ಮುನಿರತ್ನ ಬೇಜವಾಬ್ದಾರಿತನ ಪ್ರಶ್ನಿಸಿದ್ದೇನೆ. ಆದರೆ ಟೇಕಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಕೇಳೋಕೆ ಅವರ್ಯಾರು? ತನ್ನನ್ನು ಬದಲಿಸಲು ಮುಖ್ಯಮಂತ್ರಿಯವರನ್ನು ಒತ್ತಾಯಿಸಲಿಕ್ಕೆ ಅವರೇನು ನಮ್ಮ ಪಕ್ಷದವರೇ ಎಂದು ಪ್ರಶ್ನಿಸಿದ್ದಾರೆ. ಇದು ಅವರ ಗೂಂಡಾ ಸಂಸತಿಯನ್ನು ಬಿಂಬಿಸುವಂತಿದೆ. ಪ್ರಶ್ನಿಸಲಿಕ್ಕೆ ನಾನೊಬ್ಬ ಶಾಸಕ, ನಾನೂ ಸಹ ಸರ್ಕಾರದ ಒಂದು ಭಾಗವೇ ಆಗಿದ್ದೇನೆ. ಜಿಲ್ಲೆಯ ಅಭಿವೃದ್ಧಿ ಕ್ಷೀಣಿಸಿದರೆ ಜನ ನನ್ನನ್ನು ಪ್ರಶ್ನಿಸುತ್ತಾರೆ. ಹಾಗಾಗಿ ನಾನೇಕೆ ಅವರ ಕಾರ್ಯಶೈಲಿ ಪ್ರಶ್ನಿಸಬಾರದು? ಎಂದು ಬೇಸರ ವ್ಯಕ್ತಪಡಿಸಿದರು. ಇಷ್ಟಕ್ಕೂ ಮುನಿರತ್ನ ಏನಾದರೂ ಪಾಕಿಸ್ತಾನದ ಜಿಯಾಉಲ್ಲಾನ ಸರ್ಕಾರದಲ್ಲಿ ಸಚಿವರಾಗಿದ್ದಾರೆಯೇ? ನಾನೇನು ಬಿಜೆಪಿಯಲ್ಲಿ ಮುನಿರತ್ನ ಹೇಗೆ ನಡೆದುಕೊಳ್ಳುತ್ತಿದ್ದಾರೆಂದು ಪ್ರಶ್ನಿಸಿಲ್ಲ. ಸಂವಿಧಾನ ಬದ್ಧವಾಗಿ ಅಧಿಕಾರದಲ್ಲಿದ್ದಾರೆ, ನಾನೂ ಸಹ ಅದೇ ಸಂವಿಧಾನದಲ್ಲಿರುವಂತೆಯೇ ವಿಧಾನ ಪರಿಷತ್ ಸದಸ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಅವರ ಬೇಜವಾಬ್ದಾರಿತನ ಪ್ರಶ್ನಿಸುವ ಹಕ್ಕು ನನಗೆ ಇದೆಯೋ ಇಲ್ಲವೋ ಎಂಬುದನ್ನು ಓದಿ ತಿಳಿದುಕೊಳ್ಳಲಿ ಎಂದು ಗೋವಿಂದರಾಜು ಸವಾಲು ಹಾಕಿದರು.