ಅಕ್ರಮ ಕಟ್ಟಡಗಳ ತೆರವಿಗೆ ಸದಸ್ಯರ ಅಗ್ರಹ

6udp nagarasabhe 1
Published on

ಉಡುಪಿ : ನಗರ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ಇಲ್ಲದೆ ಇರುವ ಸಮಯದಲ್ಲಿ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿ ಕಟ್ಟಡಗಳಿಗೆ ಪರವಾನಿಗೆ ನೀಡಿದ್ದು, ಅಕ್ರಮ ಕಟ್ಟಡಗಳನ್ನು ಶೀಘ್ರ ತೆರವುಗೊಳಿಸುವಂತೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.


ಶುಕ್ರವಾರ ನಗರಸಭೆಯ ಸಾಮಾನ್ಯ ಸಭೆ  ನೂತನ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.


ವಿಷಯ ಪ್ರಸ್ತಾಪಿಸಿದ ಸದಸ್ಯ ಜಿಟಿ ಹೆಗಡೆ, ಶಿರಿಬೀಡು ವಾರ್ಡ್  ವ್ಯಾಪ್ತಿಯಲ್ಲಿ ಬಹು ಮಹಡಿ ಕಟ್ಟಡ ನಿಮಾರ್ಣ ಸಂದರ್ಭದಲ್ಲಿ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ರ್ನಿಲಕ್ಷವಹಿಸಿ ಡೋರ್ ನಂಬರ್ ನೀಡಿದ್ದಾರೆ. ಅದೇ ರೀತಿ ಮಸೀದಿ ರಸ್ತೆಯಲ್ಲಿ ಈ ಹಿಂದೆ ನಗರಸಭೆಯಿಂದ ಹೋಟೆಲ್ ತೆರವು ಮಾಡಲಾಗಿತ್ತು. ಈಗ ಮತ್ತೆ ಅದೇ ಜಾಗದಲ್ಲಿ ಹೋಟೆಲ್ ತಲೆಎತ್ತಿದೆ. ಇದಕ್ಕೆ ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ರಾಯಪ್ಪ, ಅಕ್ರಮ ಹೋಟೆಲ್ ಒಂದು ವಾರದೊಳಗೆ ತೆರವುಗೊಳಿಸಲಾಗುವುದು. ಅದೇ ರೀತಿ ಸರ್ಕಾರಿ ರಸ್ತೆ ಜಾಗ ಅತಿಕ್ರಮಣ ಮಾಡಿದ ಬಹುಮಹಡಿ ಕಟ್ಟಡದ ಡೋರ್ ನಂಬರ್ ರದ್ದುಗೊಳಿಸಲಾಗುವುದು ಎಂದು ತಿಳಿಸಿದರು.


ಸದಸ್ಯ ಕೃಷ್ಣರಾಜ ಕೊಡಂಚ ಮಾತನಾಡಿ, ಚಿಟ್ಪಾಡಿ ವಾರ್ಡಿನಲ್ಲಿ ಅಮೆರಿಕಾ ಮೂಲದ ಸಂಸ್ಥೆಗೆ ವಾಸ್ತವ್ಯಕ್ಕೆ ಭೂಪರಿವರ್ತನೆಯಾದ ಭೂಮಿಯಲ್ಲಿ ವಾಣಿಜ್ಯ ಕಟ್ಟಡವನ್ನು ಕಟ್ಟುವುದಕ್ಕೆ ಅನುಮತಿ ನೀಡಲಾಗಿದೆ. ಇದೇ ಕಟ್ಟಡಕ್ಕೆ ಸಮುದಾಯ ಭವನ ನಿಮಾರ್ಣದ ಹೆಸರಿನಲ್ಲಿ  ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಗರಿಷ್ಠ ಅನುದಾನಕ್ಕೆ ಶಿಫಾರಸು ಮಾಡಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದರು.
 ಈ ಎಲ್ಲಾ  ಕಟ್ಟಡಗಳ ನಿಮಾರ್ಣ ಕಾನೂನು ಉಲ್ಲಂಘನೆಯಾಗಿದ್ದರೇ ತೆರವುಗೊಳಿಸುವುದಾಗಿ ಪೌರಾಯುಕ್ತರು ಭರವಸೆ ನೀಡಿದರು.

ವಿಜಯ ಕೊಡವೂರು ಮಾತನಾಡಿ, ನಗರಸಭೆಯ ಶೇ. 5 ಅಂಗವಿಕಲರ ಕಲ್ಯಾಣ ನಿಧಿ ಹಣವನ್ನು ರಸ್ತೆಗಳಿಗೆ ಬಳಸಬೇಡಿ. ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವಂತೆ ಅಂಗವಿಕಲರನ್ನು ನೋಡಿಕೊಳ್ಳುವವರಿಗೆ ವಿನಿಯೋಗಿಸಿ. ಇದರಿಂದ ಬಡ ಕುಟುಂಬಗಳಿಗೆ ಬಹಳಷ್ಟು ಉಪಯೋಗವಾಗಲಿದೆ ಎಂದರು. ಇದಕ್ಕೆ ಸಭೆಯಲ್ಲಿ ಸಮ್ಮತಿ ಸೂಚಿಸಲಾಯಿತು. ಸಭೆಯಲ್ಲಿ  ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ವಿಪಕ್ಷ ನಾಯಕ ರಮೇಶ್ ಕಾಂಚನ್ ಉಪಸ್ಥಿತರಿದ್ದರು.


ಕ್ಷಮೆ ಯಾಚಿಸಿದ ಪೌರಾಯುಕ್ತರು  
 ಸದಸ್ಯ ಹರೀಶ್ ಶೆಟ್ಟಿ ಮಾತನಾಡಿ, ನಗರದ ಅಂಬಲಪಾಡು ವಾರ್ಡಿನ ರಸ್ತೆಗಳಿಗೆ ಖಾಸಗಿ ವ್ಯಕ್ತಿಯೊಬ್ಬರ ಶಿಫಾರಸಿನ ಮೇರೆಗೆ ನಗರಸಭೆಯ ಅಧಿಕಾರಿಗಳು ಡಾಮರೀಕರಣ, ಚರಂಡಿ ನಿಮಾರ್ಣ ಇತ್ಯಾದಿಗೆ ಸುಮಾರು 40 ಲಕ್ಷ ರೂ. ಅಂದಾಜುಪಟ್ಟಿ ತಯಾರಿಸಿ, ಟೆಂಡರ್ ಕರೆದು, ಕಾಮಗಾರಿಯನ್ನು ನಡೆಸಿದ್ದಾರೆ. ಆದರೇ ಈ ವಾರ್ಡಿನ ಜನರ ಪ್ರತಿನಿಧಿಯಾಗಿರುವ ತನ್ನ ಗಮನಕ್ಕೆ ಈ ವಿಷಯವನ್ನು ತಂದಿಲ್ಲ ಎಂದು ಆರೋಪಿದರು. ಇದಕ್ಕೆ ಶಾಸಕ ಯಶಪಾಲ್ ಸುವರ್ಣ ದನಿಗೂಡಿಸಿ, ವಾರ್ಡಿನ ಸದಸ್ಯರ ಶಿಫಾರಸು ಇಲ್ಲದೇ  ಮೂರನೇ ವ್ಯಕ್ತಿಯ ಶಿಫಾರಸಿಗೆ ಹೇಗೆ ಮಂಜೂರಾತಿ ನೀಡಿದಿರಿ ಎಂದು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪೌರಾಯುಕ್ತರು, ನನ್ನ ಟೇಬಲಿಗೆ ದಿನಕ್ಕೆ ನೂರಾರು ಫೈಲುಗಳು  ಬರುತ್ತವೆ. ಯಾರು ಶಿಫಾರಸು ಮಾಡಿದ್ದು ಎಂದು ನೋಡುವುದಕ್ಕಾಗುವುದಿಲ್ಲ. ಕಣ್ತಪ್ಪಿನಿಂದ ಹೀಗೆ ಆಗಿರಬಹುದು ಎಂದರು. ಇದಕ್ಕೆ ಶಾಸಕರು ಮತ್ತು ಆಡಳಿತ ಪಕ್ಷ ಬಿಜೆಪಿಯ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.  ಕೊನೆಗೆ ಪೌರಾಯುಕ್ತರು ನನ್ನಿಂದ ತಪ್ಪಾಗಿದೆ, ಕ್ಷಮೆ ಕೇಳುತ್ತೇನೆ  ಎಂದರು.

  ನಗರಸಭೆಯ ಜೆಸಿಬಿ ಸೀಝ್ ಮಾಡಿದ ಪೊಲೀಸರು
ರಾಹೆ ಪಕ್ಕದಲ್ಲಿ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಶೆಡ್ ತೆರವಿಗೆ ಕಳುಹಿಸಲಾಗಿದ್ದ ನಗರಸಭೆ ಜೆಸಿಬಿಯನ್ನು ಪೊಲೀಸರು ಜಫ್ತುಗೊಳಿಸಿದ್ದಾರೆ. ಅಕ್ರಮ ಶೆಡ್ ಕಟ್ಟಿದವನು ನಮ್ಮ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿದ್ದಾನೆ.  ನಗರಸಭೆಯ ಕಾರ್ಯಾಚರಣೆಗೆ ರಕ್ಷಣೆ ನೀಡಬೇಕಾಗಿದ್ದ ಪೊಲೀಸರಿಗೆ ಕಾನೂನು ಉಲ್ಲಂಘಿಸಿದವರಿಗೆ ರಕ್ಷಣೆ ನೀಡಿದ್ದಾರೆ ಎಂದು ಬಿಜೆಪಿ ಸದಸ್ಯ ಬಾಲಕೃಷ್ಣ ಶೆಟ್ಟಿ ಅಕ್ಷೇಪವ್ಯಕ್ತಪಡಿಸಿದರು. ನಗರಸಭೆಯ ಆಸ್ತಿಯನ್ನು ಅಕ್ರಮವಾಗಿ ಜಪ್ತು ಮಾಡಿ, 15 ಸಾವಿರ ರು. ದಂಡ ವಿಧಿಸಿದ ಸಬ್ ಇನ್ಸ್ಪೆಕ್ಟರ್ ವಿರುದ್ಧ ಸರ್ಕಾರಕ್ಕೆ ದೂರು ಸಲ್ಲಿಸಲು ಸಭೆಯಲ್ಲಿ ರ್ನಿಣಯಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net