ಅಕ್ರಮ ಕಟ್ಟಡ ನಿರ್ಮಾಣ: ಬೋಗಾದಿ ಗ್ರಾಮಸ್ಥರ ಪ್ರತಿಭಟನೆ

11
Published on

ಮೈಸೂರು: ಆಶ್ರಯ ಯೋಜನೆಯಡಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಬೋಗಾದಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು>

ಬೋಗಾದಿ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬೋಗಾದಿ ಗ್ರಾಮದ ಸರ್ವೇ ನಂಬರ್ 319ರಲ್ಲಿ ಆಶ್ರಯ ಯೋಜನೆಯಡಿ 2002ರಲ್ಲಿ 357 ನಿವೇಶನಗಳನ್ನು ಮಾತ್ರ ಮಂಜೂರು ಮಾಡಲಾಗಿದೆ. ಜತೆಗೆ, ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರವನ್ನೂ ವಿತರಣೆ ಮಾಡಲಾಗಿದೆ. ಆದರೀಗ ಗ್ರಾಮದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಕಲಿ ಹಕ್ಕುಪತ್ರ ಸೃಷ್ಟಿಸಿ ಕಾನೂನುಬಾಹಿರವಾಗಿ ನಿವೇಶನ ರಚಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸದರಿ ನಿವೇಶನಗಳಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಅಕ್ರಮ ನಿವೇಶನ ಮಾರಾಟ, ಈ ಜಾಗದಲ್ಲಿ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ನಂತರ ಬೋಗಾದಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಮುಖಂಡರಾದ ಅರುಣ್‌ಕುಮಾರ್‌ಗೌಡ, ನಾಗಣ್ಣ, ಸಿದ್ದೇಗೌಡ, ಶಂಕರಣ್ಣ, ರವಿಕುಮಾರ್, ರವಿಚಂದ್ರ, ರಘು, ತ್ಯಾಗರಾಜು, ರಾಘವೇಂದ್ರ, ಕೆಂಚೇಗೌಡ, ಸೀಗಳ್ಳಿ ರವಿ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net