

ವಿಜಯವಾಣಿ ಸುದ್ದಿಜಾಲ ಗದಗ
ಚುನಾವಣೆ ಪ್ರಣಾಳಿಕೆಯಲ್ಲಿ 10 ಕೆಜಿ ಉಚಿತ ಅಕ್ಕಿ ನೀಡುವ ವಿಚಾರ ಪ್ರಸ್ತಾಪಿಸುವಾಗ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷ ಕೇಳಿತ್ತಾ? ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಗದಗ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದವರು, ಈ ವರೆಗೂ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು ಎಂಬುದನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ. ಕಾಂಗ್ರೆಸ್ಸಿಗೆ ಇದು ತಾತ್ಕಾಲಿಕ ಜಯ. ಕೇಂದ್ರದಿಂದ ನೀಡುವ ಅಕ್ಕಿ ನಮ್ಮದೇ ಎಂದು ಅನ್ನರಾಮಯ್ಯ ಎಂದು ಹೆಸರಿಟ್ಟುಕೊಟ್ಟಂಡ ಸಿದ್ದರಾಮಯ್ಯ ಈ ಕೇಂದ್ರವನ್ನು ದೋಷಿಸುತ್ತಿದ್ದಾರೆ. ಈಡೀ ದೇಶಕ್ಕೆ ನೀಡುವ ಅಕ್ಕಿ ಒಂದೇ ರಾಜ್ಯದ ಸರ್ಕಾರ ವಿತರಿಸಲು ಸಾಧ್ಯವಿಲ್ಲ ಎಂದರು.
ಕೆಟ್ಟ ಕನಸು: ಇದೊಂದು ಕೆಟ್ಟ ಕನಸು. ಬರುವಂತಹ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಕಹಳೆ ಮೊಳಗಲಿದೆ. ಬಿಜೆಪಿ 7 ತಂಡಗಳಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದೆ. ಸಂಘಟನೆ, ಸಾಧನೆ, ನಾಯಕತ್ವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಸೋಲನ್ನು ಕೆಟ್ಟಕನಸನ್ನು ಅಂದುಕೊಂಡು ಕಾರ್ಯಕರ್ತರು ಪಕ್ಷದ ಕೆಲಸಕ್ಕೆ ಮುನ್ನುಗ್ಗಬೇಕು. ಒಂದು ವಂಶಕ್ಕೆ ಅಧಿಕಾರ ನೀಡಬಾರದು ಎಂದು ದೇಶದ ಜನರು ತೀರ್ಮಾನಿಸಿದ್ದಾರೆ. 2024 ರ ಚುನಾವಣೆವರೆಗೂ ತಾಳ್ಮೆ ವಹಿಸಿರಿ ಎಂದರು.
ಮೋದಿ ವಿರುದ್ಧ ಫಲಿಸದು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಒಟ್ಟಾಗಿ ಪ್ರಯತ್ನ ಮಾಡುವುದು ಹೊಸ ವಿಷಯವೇನಲ್ಲ. ಈ ಹಿಂದೆಯೂ ವಿಪಕ್ಷಗಳು ವಿಫಲವಾಗಿದ್ದವು. ಕೋವಿಡ್ ಸಂದರ್ಭದಲ್ಲಿ ದೇಶಕ್ಕೆ ಮೋದಿ ಕೊಟ್ಟ ಸಂಜೀವಿನಿ ಜನರು ಮರೆತಿಲ್ಲ.
ನಾಯಕತ್ವದ ಕೊರತೆ: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿದೆ ಎಂಬ ಮಾಧ್ಯದವರ ಪ್ರಶ್ನೆಗೆ ಉತ್ತರಿಸಿದ ಕೆ.ಎಸ್. ಈಶ್ವರಪ್ಪ, ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇದೆಯೇ? ಸಿಎಂ ಗಾದಿಗಾಗಿ ಸಿದ್ದರಾಮಯ್ಯ, ಡಿಕೆಶಿ ಬಹಿರಂಗ ಕಿತ್ತಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಬಾರದು ಎಂದು 15 ಅಂಶಗಳನ್ನು ಬಹಿರಂಗಗೊಳಿಸಿದ ಡಿಕೆಶಿ, ಖರ್ಗೆ ಸಿಎಂ ಆಗಲಿ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆದರು.
ಇಬ್ಬರು ಮೋಸಗಾರರು. ಬೋಗಸ್ ಗ್ಯಾರಂಟಿ ನೀಡಿದ್ದಾರೆ. ತಡವಾಗಿ ಜನರಿಗೆ ಇವರ ಮೋಸ ತಿಳಿಯಲಿದೆ ಎಂದರು.
ಕೆಂಪಣ್ಣ ಕಾಂಗ್ರಸ್ ಎಜೆಂಟ?: ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಎಜೆಂಟ್ ಇದ್ದಂತೆ. ಒಂದು ಸಾಕ್ಷಿಯನ್ನೂ ಒದಗಿಸಲಿಲ್ಲ. ಕಾಂಗ್ರೆಸ್ ಸೃಷ್ಟಿಸಿದ ಹಲವು ಏಜೆಂಟರಲ್ಲಿ ಕೆಂಪಣ್ಣ ಕೂಡ ಒಬ್ಬ ಎಂದು ಈಶ್ವರಪ್ಪ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ, ಸಂಸದ ಸಂಗಣ್ಣ ಕರಡಿ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಬಿಜೆಪಿ ಮುಖಂಡ ಎಂ.ಎಸ್. ಕರಿಗೌಡ್ರ, ಮಾಧವ ಗಣಾಚಾರಿ, ರವಿ ದಂಡಿನ್ ಇತರರು ಉಪಸ್ಥಿತರಿದ್ದರು.