

ಶಿರಾಳಕೊಪ್ಪ/ಶಿವಮೊಗ್ಗ: ಅಕ್ಕನ ಮೊಮ್ಮಗುವಿನ ತೊಟ್ಟಿಲ ಶಾಸ್ತ್ರ ಮುಗಿಸಿಕೊಂಡು ವಾಪಸ್ ಬರುವ ವೇಳೆ ಸಂಭವಿಸಿದ ಅಪಘಾತದಲ್ಲಿ ಅಜ್ಜಿ, ಮಗಳು ಮತ್ತು ಮೊಮ್ಮಗಳು ಸಾವನ್ನಪ್ಪಿದ ಧಾರುಣ ಘಟನೆ ಶಿಕಾರಿಪುರ ತಾಲೂಕಿನ ಮಂಚಿಕೊಪ್ಪದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ. ತನ್ನ ಮಗುವಿನ ತೊಟ್ಟಿಲ ಶಾಸ್ತ್ರಕ್ಕೆ ಚಿಕ್ಕಮ್ಮನ ಕುಟುಂಬವನ್ನು ಕರೆದುಕೊಂಡು ಹೋಗಿದ್ದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಲುಗಿನಕೊಪ್ಪದ ಗಂಗಮ್ಮ (50), ಜ್ಯೋತಿ (30), ಸೌಜನ್ಯ(4) ಮೃತ ದುರ್ದೈವಿಗಳು.
ಹುಲುಗಿನಕೊಪ್ಪದ ಮಲ್ಲಿಕಾರ್ಜುನ್ ಅವರು ತಮ್ಮ ಮಗುವಿನ ತೊಟ್ಟಿಲ ಶಾಸ್ತ್ರಕ್ಕೆ ಚಿಕ್ಕಮ್ಮ ಗಂಗಮ್ಮ, ಅವರ ಮಗಳು ಜ್ಯೋತಿ ಮತ್ತು ಮೊಮ್ಮಗಳು ಸೌಜನ್ಯಳನ್ನು ಶಿಕಾರಿಪುರ ಬಳಿ ಇರುವ ದೂಪದ ಹಳ್ಳಿಗೆ ಕರೆದುಕೊಂಡು ಹೋಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಹುಲುಗಿನಕೊಪ್ಪಕ್ಕೆ ಬೈಕ್‌ನಲ್ಲಿ ವಾಪಸ್ ಮರುಳುವಾಗ ರಾತ್ರಿ 7ರ ವೇಳೆಗೆ ಮಂಚಿಕೊಪ್ಪದ ಬಳಿ ಹಿರೇಕೆರೂರ ಕಡೆಯಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕಾರು ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ 4 ವರ್ಷದ ಸೌಜನ್ಯ ಸ್ಥಳದಲ್ಲೇ ಮೃತಪಟ್ಟರೆ, ಸೌಜನ್ಯಳ ಅಜ್ಜಿ ಗಂಗಮ್ಮ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜ್ಯೋತಿ ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗಕ್ಕೆ ಸ್ಥಳಾಂತರಿಸುವಾಗ ಸವಳಂಗ ಬಳಿ ಕೊನೆಯುಸಿರೆಳೆದಿದ್ದಾರೆ. ಚಿಕ್ಕಮ್ಮ, ಸಹೋದರಿ ಹಾಗೂ ಆಕೆಯ ಮಗಳನ್ನು ಬೈಕ್‌ನಲ್ಲಿ ತೊಟ್ಟಿಲ ಶಾಸ್ತ್ರಕ್ಕೆ ಕರೆದುಕೊಂಡು ಹೋಗಿದ್ದ ಮಲ್ಲಿಕಾರ್ಜುನ್ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರಿನ ಚಾಲಕ ಕುಮಾರ್ ಎಂಬ ವ್ಯಕ್ತಿಯನ್ನು ಶಿರಾಳಕೊಪ್ಪ ಪೊಲಿಸರು ಬಂಧಿಸಿದ್ದಾರೆ.