ಅಕ್ಕ ಅನ್ನಪೂರ್ಣತಾಯಿ ಬಸವ ನಿಷ್ಠೆ ಅನನ್ಯ

Akka abhinandana sanman - Copy
Published on

ಬೀದರ್: ಅಕ್ಕ ಅನ್ನಪೂರ್ಣತಾಯಿ ಅವರ ಬಸವ ನಿಷ್ಠೆ ಅನನ್ಯವಾಗಿದೆ. ಅವರು ಬಸವ ಬೆಳಕು, ಜನಮಾನಸದಲ್ಲಿ ನೈತಿಕ ಮೌಲ್ಯ ಪ್ರಜ್ವಲಿಸುವ ದೀಪವಾಗಿದ್ದಾರೆ ಎಂದು ಇಳಕಲ್‍ನ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ ಬಣ್ಣಿಸಿದರು.
ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕøತರಾದ ಲಿಂಗಾಯತ ಮಹಾಮಠ ಹಾಗೂ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ ಅವರಿಗೆ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಕನವರು ಬಸವ ಭಕ್ತರಲ್ಲಿ ಹೊಸ ಚೈತನ್ಯ ತುಂಬಿದರು. ಅವರ ಸಮಾಜೋಧಾರ್ಮಿಕ ಕಾರ್ಯಗಳನ್ನು ವರ್ಣಿಸಲು ಶಬ್ದಗಳು ಸಾಲವು. ಅವರಿಗೆ ಗೌರವ ಡಾಕ್ಟರೇಟ್ ಸಂದಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಡಾ. ಗಂಗಾದೇವಿ ಮಾತನಾಡಿ, ಅಕ್ಕನವರು ಮಾರಣಾಂತಿಕ ಕಾಯಿಲೆಗೆ ತುತ್ತಾದಾಗ ಬಸವ ತತ್ವದ ಕೊಂಡಿ ಕಳಚುವುದೇನೋ ಎನ್ನುವ ಆತಂಕ ಕಾಡಿತ್ತು. ಬಸವ ಕೃಪೆಯಿಂದ ಅವರಿಗೆ ಪುನರ್ಜನ್ಮವಾಗಿದೆ. ಗೌರವ ಡಾಕ್ಟರೇಟ್ ಕೂಡ ದೊರೆತಿದ್ದರಿಂದ ಖುಷಿ ಇಮ್ಮಡಿಗೊಂಡಿದೆ ಎಂದು ತಿಳಿಸಿದರು.
ಕೀರ್ತಿ, ಪ್ರತಿಷ್ಠೆಗಳ ಬೆನ್ನು ಬೀಳದೆ, ನಿರಂತರ ಸೇವಾ ಕಾರ್ಯದಲ್ಲಿ ತೊಡಿಸಿಕೊಂಡಿದ್ದರೆ ಪದವಿ, ಪುರಸ್ಕಾರಗಳು ತಾನಾಗಿಯೇ ಬರುತ್ತವೆ ಎನ್ನುವುದಕ್ಕೆ ಅನ್ನ ಅನ್ನಪೂರ್ಣತಾಯಿ ಅವರೇ ಸಾಕ್ಷಿ ಎಂದರು.
ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವ ತತ್ವದವರ ಹಿಂದೆ ಷಡ್ಯಂತ್ರ ನಡೆಯುತ್ತಿದೆ. ಬಸವ ಭಕ್ತರು ಎಚ್ಚರಗೊಳ್ಳಬೇಕು. ಬಸವ ತತ್ವ ಪ್ರಸಾರದಲ್ಲಿ ಅಕ್ಕ ಅನ್ನಪೂರ್ಣ ತಾಯಿ ಅಗ್ರಗಣ್ಯರೆನ್ನುವುದನ್ನು ಮರೆಯಬಾರದು ಎಂದು ಹೇಳಿದರು.
ಅಕ್ಕ ಅನ್ನಪೂರ್ಣ ತಾಯಿ ಮಾತನಾಡಿ, ಒಬ್ಬರ ನೋವು ಸಂಭ್ರಮಿಸುವುದು ಕೀಳು ಅಭಿರುಚಿ. ದೂಳೆದ್ದಾಗ ಸ್ವಲ್ಪ ಸಮಾಧಾನದಿಂದಿದ್ದರೆ ವಾತಾವರಣ ತಾನಾಗೇ ತಿಳಿಯಾಗುವುದು. ಸೇವಾ ಧಾರಿಗಳಿಗೆ, ತ್ಯಾಗಿಗಳಿಗೆ ನೋವು ನೀಡಬಾರದು ಎಂದು ನುಡಿದರು.
ಕಲ್ಯಾಣ ಕ್ರಾಂತಿಯ ನೋವು ಅನುಭವಿಸದವರಿಂದ ಶರಣ ಸಮಾಜ ಕಟ್ಟಲು ಸಾಧ್ಯವಿಲ್ಲ. ಯುವ ಪೀಳಿಗೆಗೆ ಶರಣರ ತ್ಯಾಗ, ಬಲಿದಾನಗಳ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಅಭಿನಂದನಾ ನುಡಿ ಆಡಿದರು.
ಹುಲಸೂರಿನ ಡಾ. ಶಿವಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಕಲಬುರಗಿಯ ಪ್ರಭುಶ್ರೀ ತಾಯಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ, ಗೋರಚಿಂಚೋಳಿಯ ಸಿದ್ಧರಾಮೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಡಾ. ಪ್ರಿಯಾ ಎಲಿ, ಪೂರ್ಣಚಂದ್ರ ಮೈನಾಳೆ, ಸುಷ್ಮಾ ಪವಾಡಶೆಟ್ಟಿ, ಬಸವ ಸೃಷ್ಟಿ ಮಠಪತಿ ಮತ್ತು ಸಂಗಡಿಗರ ವಚನ ನೃತ್ಯಗಳು ಸಭಿಕರ ಮನ ಸೂರೆಗೊಂಡವು. ಅಲ್ಲಮಪ್ರಭು ನಗರದ ಅಕ್ಕನ ಬಳಗ ಮತ್ತು ಜಹೀರಾಬಾದ್‍ನ ಶರಣೆಯರ ಕೋಲಾಟಗಳು ಸಮಾರಂಭದ ಸಂಭ್ರಮ ಹೆಚ್ಚಿಸಿದವು. ಶಿವಕುಮಾರ ಪಾಂಚಾಳ ಮತ್ತು ತಂಡ ಹಾಗೂ ಶಾಂಭವಿ ಅವರಿಂದ ವಚನ ಗಾಯನ ಸುಮಧುರವಾಗಿ ಮೂಡಿ ಬಂದಿತು. ರಮೇಶ ಮಠಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂಗಾಯತ ಮಹಾಮಠದ ಪ್ರಭುದೇವರು ಸ್ವಾಗತಿಸಿದರು. ರಾಜಕುಮಾರ ಪಾಟೀಲ ನಿರೂಪಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net