ಅಕ್ಕ ಅನ್ನಪೂರ್ಣಗೆ ಗೌರವ ಡಾಕ್ಟರೇಟ್

Akka annapoorna
Published on

ಬೀದರ್: ಇಲ್ಲಿಯ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣತಾಯಿ ಅವರು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‍ಗೆ ಭಾಜನರಾಗಿದ್ದಾರೆ.
ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬುಧವಾರ ನಡೆದ ವಿಶ್ವವಿದ್ಯಾಲಯದ ಹತ್ತನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ, ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ವಿ. ಕಟ್ಟಿಮನಿ, ಕುಲಸಚಿವ (ಮೌಲ್ಯಮಾಪನ) ಪ್ರೊ. ಡಿ.ಎನ್. ಪಾಟೀಲ, ಕುಲಸಚಿವ (ಆಡಳಿತ) ಪ್ರೊ. ಎಂ. ಹನುಮಂತಪ್ಪ, ಪ್ರೊ. ಶಿವಾನಂದ ಎಸ್.ಜಿ, ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯರು ಇದ್ದರು.
ವಿಶ್ವವಿದ್ಯಾಲಯ ಪ್ರಶಂಸೆ: ಅಕ್ಕ ಅನ್ನಪೂರ್ಣತಾಯಿ ಅವರ ಸಮಾಜೋ ಧಾರ್ಮಿಕ ಸೇವೆಗೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್‍ನೊಂದಿಗೆ ನೀಡಿದ ತನ್ನ ಸನ್ಮಾನ ಪತ್ರದಲ್ಲಿ ಪ್ರಶಂಸೆ ವ್ಯಕ್ತಪಡಿಸಿದೆ.
1963 ರಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ ಅಕ್ಕ ಅನ್ನಪೂರ್ಣತಾಯಿ ಬಾಲ್ಯದಿಂದಲೇ ಅನುಭಾವದ ತಾತ್ವಿಕ ಚಿಂತನೆಗಳಲ್ಲಿ ತೊಡಗಿಸಿಕೊಂಡವರು. ಎಂ.ಎ. ಕನ್ನಡ ಪದವಿ ಪಡೆದಿರುವ ಅವರು, ಜನಪರ ಕಾಳಜಿ, ಸಮ ಸಮಾಜ ನಿರ್ಮಾಣದ ಕನಸು ಹೊತ್ತು ಅವುಗಳನ್ನು ಸಾಕಾರಗೊಳಿಸಲು ಸತತ ಪ್ರಯತ್ನಿಸಿದವರು. ಹತ್ತು ಹಲವು ಆಧ್ಯಾತ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿ, ದೇಶ, ವಿದೇಶಗಳಲ್ಲಿ ಅನುಭಾವ ಗೋಷ್ಠಿಗಳನ್ನು ನೀಡಿದ್ದಾರೆ. ಬಸವ ತತ್ವ ಪ್ರಚಾರಕರಾಗಿ,  ಪ್ರಬುದ್ಧ ಚಿಂತಕರಾಗಿ ಕನ್ನಡ ತತ್ವಜ್ಞಾನದ ಹಿರಿಮೆಯನ್ನು ಜಗತ್ತಿಗೆ ಸಾರಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದೆ.
ದೇಶದಾದ್ಯಂತ ಬಸವ ತತ್ವ ಕುರಿತು ಪ್ರವಚನ ಕೊಟ್ಟಿದ್ದಾರೆ. ನೂರಾರು ವಿಚಾರ ಸಂಕಿರಣ, ಅನುಭಾವ ಗೋಷ್ಠಿಗಳನ್ನು ನಡೆಸಿದ್ದಾರೆ. ಶೋಷಿತರು, ನಿರ್ಗತಿಕರ ಗಟ್ಟಿ ಧ್ವನಿಯಾಗಿ ಅವರಲ್ಲಿ ಜೀವನೋತ್ಸಾಹ ತುಂಬಿದ್ದಾರೆ. ಗಡಿನಾಡಿನ ಭಾಷೆ- ಧರ್ಮ ಸಮನ್ವಯದ ಶಕ್ತಿಯಾಗಿದ್ದಾರೆ ಎಂದು ಶ್ಲಾಘಿಸಿದೆ.
ಅಕ್ಕ ಅನ್ನಪೂರ್ಣ ಅವರಿಗೆ ಗೌರವ ಡಾಕ್ಟರೇಟ್ ದೊರೆತಿದ್ದಕ್ಕೆ ಪ್ರಮುಖರಾದ ರಮೇಶ ಮಠಪತಿ, ಸಿ.ಎಸ್. ಪಾಟೀಲ, ಮಾಣಿಕಪ್ಪ ಗೋರನಾಳೆ, ಪ್ರಕಾಶ ಮಠಪತಿ, ಅಣವೀರ ಕೊಡಂಬಲ್, ರಾಜಕುಮಾರ ಪಾಟೀಲ, ಸಿ.ಎಸ್. ಗಣಾಚಾರಿ, ಆರ್.ಕೆ. ಪಾಟೀಲ, ಬಸವರಾಜ ಶೇರಿಕಾರ್, ಜಗನ್ನಾಥ ಚಿಮಕೋಡ್, ಚನ್ನಬಸಪ್ಪ ಹಂಗರಗಿ, ಪ್ರಭು ಅಂಗಡಿ, ಶಂಭುಲಿಂಗ ಯಾವಗಲ್, ಅಶೋಕ ಎಲಿ, ಅವಿನಾಶ ಸಂತಸ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net