ಅಕೇಶಿಯಾ ಸಸಿ ನಾಟಿಗೆ ಗ್ರಾಮಸ್ಥರ ವಿರೋಧ

14bkl2
Published on

ಭಟ್ಕಳ: ತಾಲೂಕಿನ ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯ ಕರಿಕಲ್ ಹಾಗೂ ಜಾಲಿ ಗುಡ್ಡ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಕೇಶಿಯಾ ಸಸಿಗಳನ್ನು ಬೆಳೆಸಲು ಮುಂದಾಗಿರುವುದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಆಕೇಶಿಯಾ ಗಿಡಗಳನ್ನು ನೆಡಲು ಶನಿವಾರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಆಕೇಶಿಯಾ ಮರಗಳಿಂದ ಕರಿಕಲ್ಲು ಸುತ್ತಲಿನ ಅಂತರ್ಜಲ ಮಟ್ಟ ಕುಸಿದಿದೆ. ಅಕೇಶಿಯಾ ಮರಗಳಿಂದ ಮಂಗಗಳಿಗೂ ಆಹಾರ ಸಿಗುತ್ತಿಲ್ಲ. ಹೀಗಾಗಿ ಅವುಗಳು ಊರು ಸೇರುತ್ತಿವೆ. ಇದರಿಂದಾಗಿಯೆ ಪ್ರತಿ ವರ್ಷ ಜನರು ಮಂಗಗಳ ದಾಳಿಗೆ ತುತ್ತಾಗುತ್ತಲೇ ಇದ್ದಾರೆ. ಆದ್ದರಿಂದ ಕರಿಕಲ್ ಭಾಗದಲ್ಲಿ ಮಾವು, ನೇರಳೆಯಂಥ ಸಸಿಗಳನ್ನು ನೆಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕಳೆದ ಗ್ರಾಮಸಭೆಯಲ್ಲಿ ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದರೂ ಈಗ ಮತ್ತೆ ಅದೇ ಅಕೇಶಿಯಾ ಸಸಿಗಳನ್ನು ನೆಡುವ ಕಾರ್ಯ ಭರದಿಂದ ಸಾಗಿದೆ. ನಮಗೆ ಇದನ್ನು ಸಹಿಸಲು ಸಾಧ್ಯವಿಲ್ಲ. ಇದು ನಮ್ಮ ಕೊನೆಯ ಎಚ್ಚರಿಕೆಯಾಗಿದೆ. ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ಕರಿಕಲ್ ಗ್ರಾಮಸ್ಥರೊಡಗೂಡಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದಕ್ಕೆ ಉತ್ತರಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ನಮಗೆ ಹಿರಿಯ ಅಧಿಕಾರಿಗಳಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಸಸಿ ನೆಡಲು ಮುಂದಾದರು. ಆಗ ಆಕ್ರೋಶಗೊಂಡ ಗ್ರಾಮಸ್ಥರು ಸಮಸ್ಯೆಯನ್ನು ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಗಮನಕ್ಕೆ ತಂದರು. ಜನರ ವಿರೋಧದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸಸಿ ನೆಡುವ ಕಾಮಗಾರಿಯನ್ನು ಸಿಬ್ಬಂದಿ ಸ್ಥಗಿತಗೊಳಿಸಿ ಮರಳಿ ನಡೆದರು. ಈ ವೇಳೆ ಮಾವಿನಕುರ್ವೆ ಗ್ರಾಪಂ ಸದಸ್ಯ ಗಣೇಶ ಮೊಗೇರ, ನಾಗರಾಜ ಮೊಗೇರ, ಗಣಪತಿ ಮೊಗೇರ, ವಸಂತ ಮೊಗೇರ, ಇತರರು ಇದ್ದರು.

ಕರಿಕಲ್ ಗುಡ್ಡ ಪ್ರದೇಶದಲ್ಲಿ ಮಾವು, ನೇರಳೆಯಂಥ ಮರಗಳು ಬೆಳೆಯುವು ದಿಲ್ಲ. ಅದಕ್ಕಾಗಿ ಆ ಪ್ರದೇಶವನ್ನು ಉರುವಲು ಕಟ್ಟಿಗೆ ಬಳಸಲು ಯೋಗ್ಯ ಎಂದು ಆಯ್ಕೆ ಮಾಡಲಾಗಿದೆ. ಅಕೇಶಿಯಾ ಗಿಡಗಳ ನಡುವೆ ಪೇರಳೆನಂಥ ಗಿಡಗಳನ್ನು ಬೆಳೆಸಲು ಯೋಜನೆ ರೂಪಿಸಿದ್ದೇವೆ. ಅಲ್ಲಿನ ಜನರೊಂದಿಗೆ ರ್ಚಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. | ಸವಿತಾ ದೇವಾಡಿಗ ಆರ್​ಎಫ್​ಒ ಭಟ್ಕಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net