

ಗುತ್ತಲ: ಭಾನುವಾರ ರಾತ್ರಿ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಗುತ್ತಲ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಜೋಳ, ಕಡಲೆ ಹಾಗೂ ಕುಸುಬಿ ಬೆಳೆಗಳಿಗೆ ಹಾನಿಯಾಗಿದೆ.
ಗುತ್ತಲ, ಬೆಳವಿಗಿ, ಗುಯಿಲಗುಂದಿ, ತೆರದಹಳ್ಳಿ, ಮೇವುಂಡಿ, ನೀರಲಗಿ, ಹಾವನೂರ, ಹುರಳಿಹಾಳ, ಗಳಗನಾಥ ಸೇರಿ ಗುತ್ತಲ ಹೋಬಳಿಯಲ್ಲಿ ಭಾನುವಾರ ರಾತ್ರಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಬಿರುಸಿನಿಂದ ಮಳೆ ಸುರಿದಿದೆ. ರೈತರು ಹಿಂಗಾರು ಹಂಗಾಮಿನಲ್ಲಿ ಜೋಳ, ಕಡಲೆ, ಕುಸುಬಿ, ಶೇಂಗಾ, ಗೋಧಿ, ಎಳ್ಳು, ರಾಗಿ, ಸಜ್ಜೆ, ನವಣಿ, ಉಳ್ಳಾಗಡ್ಡಿ, ಸೂರ್ಯಕಾಂತಿ ಬೆಳೆದಿದ್ದರು. ಕೊಯ್ಲಿಗೆ ಬಂದಿದ್ದ ಫಸಲಿಗೆ ಅಕಾಲಿಕವಾಗಿ ಸುರಿದ ಮಳೆಯಿಂದ ಹಾನಿಯಾಗಿದೆ. ಅಲ್ಪ ಪ್ರಮಾಣದಲ್ಲಿ ಹತ್ತಿ ಬೆಳೆಗೂ ಹಾನಿ ಸಂಭವಿಸಿದೆ.
ಈ ಬಾರಿ ಜೋಳದ ಬೆಳೆ ಉತ್ತಮವಾಗಿತ್ತು. ಮಳೆಗೆ ತೋಯ್ದಿರುವ ಜೋಳ ಕಪ್ಪಾಗುತ್ತದೆ. ಕಪ್ಪಾದ ಜೋಳವನ್ನು ಯಾರೂ ಖರೀದಿಸಲ್ಲ. ಅಕಾಲಿಕ ಮಳೆ ರೈತರ ಶ್ರಮ ವ್ಯರ್ಥ ಮಾಡಿದೆ.
ಮಳೆ ಸುರಿದ ನಂತರ ಜಮೀನಿನಲ್ಲಿದ್ದ ಬೆಳೆಯನ್ನು ಖಣಕ್ಕೆ ತರಲು ರೈತರು ಹರಸಾಹಸಪಡುವಂತಾಗಿದೆ. ಕೃಷಿ ಕಾರ್ವಿುಕ ಕೊರತೆ ಒಂದೆಡೆಯಾದರೆ, ಮಳೆಯಿಂದ ಕಪ್ಪುಭೂಮಿ ತೇವಾಂಶಗೊಂಡಿರುವ ಕಾರಣ ಟ್ರ್ಯಾಕ್ಟರ್ ಜಮೀನಿನೊಳಗೆ ಹೋಗದ ಸ್ಥಿತಿ ನಿರ್ವಣವಾಗಿದೆ. ಒಟ್ಟಿನಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಬೆಳೆಗೆ ಹಾನಿಯಾಗಿದ್ದು, ಕಳೆದ ವರ್ಷ ಅತೀವೃಷ್ಟಿಯಿಂದ ನಷ್ಟ ಎದುರಿಸಿ ಚೇತರಿಕೆ ಕಾಣುವ ಮುನ್ನವೇ ಮತ್ತೊಮ್ಮೆ ಹೊಡೆತ ಬಿದ್ದಿದೆ.
ಕಳೆದ ವರ್ಷ ಒಂದು ರೀತಿಯಲ್ಲಿ ಹಾನಿಯಾಗಿ ಸುಧಾರಿಸಿಕೊಳ್ಳುವ ಮೊದಲೇ ಈ ರೀತಿ ಮಳೆ ಬಂದು ಹಾನಿಯಾಗಿದೆ. ಕೃಷಿ ಕಾರ್ವಿುಕರು ಸಕಾಲಕ್ಕೆ ಸಿಗುತ್ತಿಲ್ಲ. ಎರಿಭೂಮಿಯಲ್ಲಿ ತೇವಾಂಶ ಬಹಳ ದಿನದವರೆಗೆ ಇರುವ ಕಾರಣ ಫಸಲನ್ನು ಜಮೀನಿನಿಂದ ಹೊರಗಡೆ ತರಲು ತೊಂದರೆಯಾಗಿದೆ. | ಬಸವರಾಜ ಅಜ್ಜಪ್ಪ ಗಂಗಣ್ಣನವರ, ಹಾನಿಗೊಳಗಾದ ರೈತ ಗುತ್ತಲ