ಅಂಬೇಡ್ಕರ್‌ಗೆ ಕಾಂಗ್ರೆಸ್ಸಿಗರಿಂದ ನಿರಂತರ ಅವಮಾನ

BJP
Published on

ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂಸತ್ ಪ್ರವೇಶಿಸದಂತೆ ಕಾಂಗ್ರೆಸ್ಸಿಗರು ನಿರಂತರ ಷಡ್ಯಂತರ ನಡೆಸಿದರು. ಕೊನೆಗೆ ಮೃತಪಟ್ಟಾಗಲೂ ಅವಮಾನಿಸಿದರು ಎಂದು ಸಾಮರಸ್ಯ ವೇದಿಕೆ ರಾಜ್ಯ ಸಂಚಾಲಕ ವಾದಿರಾಜ್ ಕಿಡಿಕಾರಿದರು.

ಕ್ರೀಡಾಭವನದಲ್ಲಿ ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್‌ನಿಂದ ಗುರುವಾರ ಹಮ್ಮಿಕೊಂಡಿದ್ದ ಸಂವಿಧಾನ ಸನ್ಮಾನ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಮುಂಬೈಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿತು. ಜೋಗೆಂದರ ನಾಥ್ ಮಂಡಲ್ ಮನವಿ ಮೇರೆಗೆ ಅಂದಿನ ಪೂರ್ವ ಬಂಗಾಳದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಆದರೆ, ಆ ಪ್ರದೇಶವನ್ನೇ ಪಾಕಿಸ್ತಾನಕ್ಕೆ ಸೇರ್ಪಡೆಗೊಳಿಸಿ, ಭಾರತದ ಸಂಸತ್ ಪ್ರವೇಶಿಸದಂತೆ ಷಡ್ಯಂತ್ರ ರೂಪಿಸಿತು. ಹೀಗೆ.. ಕಾಂಗ್ರೆಸ್ ನಿರಂತರ ಅವಮಾನ ಮಾಡಿದೆ ಎಂದು ದೂರಿದರು.

ಎಸ್ಸಿ, ಎಸ್ಟಿಯಂತೆ ಹಿಂದುಳಿದ ವರ್ಗ (ಒಬಿಸಿ) ಮೀಸಲಾತಿ ಕಲ್ಪಿಸಲು ಒಪ್ಪದ ನೆಹರು ಸರ್ಕಾರದಲ್ಲಿ ನಾನು ಇರುವುದಿಲ್ಲವೆಂದು ಅಂಬೇಡ್ಕರ್ ಹೇಳಿದ್ದನ್ನು ಕಾಂಗ್ರೆಸ್ ನಾಯಕರು ನೆನಪು ಮಾಡಿಕೊಳ್ಳಬೇಕು. ಹಿಂದಿನಿಂದಲೂ ಮುಸ್ಲಿಮರ ಓಲೈಕೆ ಮಾಡುತ್ತಿರುವ ನಿಮಗೆ ಆ ಸಮುದಾಯವೇ ಮುಖ್ಯವಲ್ಲವೇ ಎಂದು ಪ್ರಶ್ನೀಸಿದರು.

ಭಾರತದ ಸಂವಿಧಾನಕ್ಕೆ ಈವರೆಗೆ ಆಗಿರುವ 106ರ ಪೈಕಿ 75 ಬಾರಿ ತಿದ್ದುಪಡಿ ಕಾಂಗ್ರೆಸ್ ಅವಧಿಯಲ್ಲಾಗಿವೆ. ಇನ್ನುಳಿದ 31 ಕಾಂಗ್ರೆಸ್ಸೇತರ ಸರ್ಕಾರಗಳು ಮಾಡಿವೆ. ಬಹುಪಾಲು ತಿದ್ದುಪಡಿ ಮಾಡಿರುವ ಕಾಂಗ್ರೆಸ್, ತನ್ನ ಸ್ವಾರ್ಥಕ್ಕಾಗಿ ಸಂವಿಧಾನ ಅಮಾನತು ಮಾಡಲು ಹೊರಟಿತ್ತು. ಅದರ ಮೂಲ ಆಶಯವನ್ನೆ ದಿಕ್ಕು ತಪ್ಪಿಸಲು ಮುಂದಾದ ಅಪಕೀರ್ತಿ ಕೈ ನಾಯಕರದ್ದಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಎಂಎಲ್ಸಿ ಎನ್.ರವಿಕುಮಾರ್ ಮಾತನಾಡಿ, ಭಾರತ ಯಶಸ್ವಿ ರಾಷ್ಟ್ರವಾಗಲು ಸಂವಿಧಾನದ ಆಶಯಗಳೆಲ್ಲ ಈಡೇರಬೇಕು. ಸ್ವಾತಂತ್ರೃ ನಂತರ ಇದರ ರಚನೆ ಬಹುದೊಡ್ಡ ಸವಾಲಾಗಿತ್ತು. ಆಗ ಸಮಿತಿಯು ಎಲ್ಲ ಆಯಾಮಗಳಿಂದಲೂ ಸುದೀರ್ಘವಾಗಿ ಚರ್ಚಿಸಿ, ಮಾನವೀಯ ತತ್ವಗಳನ್ನು ಒಳಗೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಅಂಗೀಕರಿಸಿದ್ದರಿಂದ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಎನಿಸಿಕೊಂಡಿದೆ ಎಂದು ವಿಶ್ಲೇಷಿಸಿದರು.

ಜನಸಂಘದ ಶ್ಯಾಮ್‌ಪ್ರಸಾದ್ ಮುಖರ್ಜಿ ಅವರು ಸಂವಿಧಾನ ರಚನೆಗಾಗಿ ಪ್ರಾಣತೆತ್ತರು. ಅವರ ಹೋರಾಟದ ಫಲವಾಗಿ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನ ಪಾಲನೆಯಾಗುತ್ತಿದೆ. ಇದರ ಕುರಿತು ತಿಳಿವಳಿಕೆ ಇಲ್ಲದ ಕಾಂಗ್ರೆಸ್, ಬಿಜೆಪಿಯನ್ನು ಸಂವಿಧಾನ ವಿರೋಧಿ ಎನ್ನುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಟೀಕಿಸಿದರು.

ಪ್ರಧಾನಿ ಕುರ್ಚಿಗಾಗಿ ಇಂದಿರಾ ಗಾಂಧಿ ಅವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ವ್ಯಕ್ತಿ, ಸಾರ್ವಜನಿಕ ಅಭಿವ್ಯಕ್ತಿ, ಮಾಧ್ಯಮಗಳ ಸೇರಿ ಎಲ್ಲ ರೀತಿಯ ಸ್ವಾತಂತ್ರೃ ಮತ್ತು ಹಕ್ಕುಗಳನ್ನು ಮೊಟಕುಗೊಳಿಸಿದ್ದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಅವಕಾಶ ಸಿಕ್ಕಾಗ ಅಂಬೇಡ್ಕರ್ ಆಶಯಕ್ಕೆ ಧಕ್ಕೆ ತಂದಿದ್ದಾರೆ. ಇದನ್ನು ಕೈ ನಾಯಕರು ಮರೆತಂತಿದೆ ಎಂದು ವಾಗ್ದಾಳಿ ನಡೆಸಿದರು.

ಸಂಸದ ಗೋವಿಂದ ಎಂ.ಕಾರಜೋಳ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಅಭಿಯಾನದ ಸಂಚಾಲಕರಾದ ಜಿ.ಎಚ್.ಮೋಹನಕುಮಾರ್, ಭೈರಪ್ಪ, ರಾಜು, ಮುಖಂಡರಾದ ಮಲ್ಲಿಕಾರ್ಜುನ್, ಭಾರ್ಗವಿ ದ್ರಾವಿಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net