

ಚಿಕ್ಕಮಗಳೂರು: ಕ್ಷೇತ್ರದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರಾತಿ ಆದೇಶ ನೀಡಬೇಕು ಹಾಗೂ ಅನುದಾನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾದ ಮುಖಂಡರು ಬುಧವಾರ ಸಮಾಜ ಕಲ್ಯಾಣ ಇಲಾಖೆಗೆ ತೆರಳಿ ನೆಲದಲ್ಲಿ ಕುಳಿತು ಉಪ ನಿರ್ದೇಶಕರ ಎದುರೇ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ.ರವಿ ಶಾಸಕರಾಗಿದ್ದ ಅವಧಿಯಲ್ಲಿ ಪರಿಶಿಷ್ಟರು ಸಭೆ, ಸಮಾರಂಭ ಹಾಗೂ ಶುಭ ಕಾರ್ಯ ನಡೆಸಲು ಗ್ರಾಮೀಣ ಭಾಗಕ್ಕೆ ೪೮ ಅಂಬೇಡ್ಕರ್ ಭವನ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದರು.
ಈ ಸಂಬAಧ ಹೊಸದಾಗಿ ೨೭ ಅಂಬೇಡ್ಕರ್ ಭವನ ನಿರ್ಮಿಸಲು ೧.೨೦ ಕೋಟಿ ರೂ. ೨೦೨೨ರಲ್ಲಿ ಮಂಜೂರಾಗಿತ್ತು. ಆ ಅನುದಾನವು ಇಂದಿಗೂ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಖಾತೆಯಲ್ಲಿದೆ. ಆದರೆ ಇದುವರೆಗೂ ಭವನ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗದಿರುವ ಕಾರಣ ಪರಿಶಿಷ್ಟರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು.
ಒಟ್ಟು ೪೮ ರ ಪೈಕಿ ೨೭ ಹೊಸದಾದ ಭವನ ಹಾಗೂ ಅರ್ಧದಲ್ಲೇ ೨೧ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಭವನದ ನಿರ್ಮಿಸಲು ಕೆಡಿಪಿ ಸಭೆಗಳಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಚರ್ಚೆ ನಡೆಸಿದ್ದಾರೆ. ಅಲ್ಲದೇ ಸಮಾಜದ ಮುಖಂಡರುಗಳು ಹಲವಾರು ಬಾರಿ ಮನವಿ ಸಲ್ಲಿಸಿದರೂ ಇಲಾಖೆ ಗಮನಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಶಿಷ್ಟರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕ್ಷೇತ್ರದ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು ಕಾಟಾಚಾರಕ್ಕೆ ದಲಿತರ ಪರವೆಂದು ಹೇಳಿಕೊಂಡು ಅಭಿವೃದ್ಧಿ ಕಾಮಗಾರಿಗೆ ಹಣ ಬಿಡುಗಡೆಗೊಳಿಸುತ್ತಿಲ್ಲ. ನೈಜವಾಗಿ ದಲಿತರ ಪರ ಕಾಳಜಿ ಇದ್ದಲ್ಲಿ ಶೀಘ್ರವೇ ಸಮುದಾಯ ಭವನ ನಿರ್ಮಾಣಕ್ಕೆ ಸೂಚಿಸಬೇಕು ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರವು ವಿವಿಧ ಕಾಮಗಾರಿಗೆ ಆದೇಶ ನೀಡಿ ಅನುದಾನ ಬಿಡುಗಡೆಗೊಳಿಸಿದೆ. ಆದರೆ ದಲಿತರ ಮೂಲಭೂತ ಸೌಲಭ್ಯಗಳಿಗೆ ಮಾತ್ರ ಹಣವಿಲ್ಲವೆಂದು ಸಬೂಬು ಹೇಳಿಕೊಂಡು ತಿರುಗಾಡುತ್ತಿದೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ಷೇತ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ವಿಳಂಭ ನೀತಿ ಅನುಸರಿಸಿದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ವೈ.ಜಿ.ಸುರೇಶ್, ಸಹ ವಕ್ತಾರ ಹಂಪಯ್ಯ, ಜಿಪಂ ಮಾಜಿ ಸದಸ್ಯ ಜೆ.ಡಿ.ಲೋಕೇಶ್, ನಗರ ಮಂಡಲ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ರೇವನಾಥ್, ಗ್ರಾಮಾಂತರ ಉಪಾಧ್ಯಕ್ಷ ಯತೀಶ್, ಮುಖಂಡರಾದ ಕೆಂಪನಹಳ್ಳಿ ಮೋಹನ್, ಎಚ್.ಕೆ.ಕೇಶವಮೂರ್ತಿ, ರೇವನಾಥ್, ಪ್ರದೀಫ್, ಶಿವಕುಮಾರ್, ಧರ್ಮರಾಜು, ಚಂದ್ರು, ಸಂಜು, ಪ್ರಕಾಶ್, ವಿಜಯ್, ಆನಂದ್ ಮತ್ತಿತರರಿದ್ದರು.