

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ವ್ಯಕ್ತಿತ್ವ ನಿರ್ಮಾಣ, ಬರವಣಿಗೆ, ಚಳವಳಿಯಲ್ಲಿ ಮೂವರು ದೊರೆಗಳು, ಒಬ್ಬ ವಿದ್ವಾಂಸರ ಪ್ರಮುಖ ಪಾತ್ರ ಇದೆ ಎಂದು ಚಿಂತಕ, ಪ್ರಾಧ್ಯಾಪಕ ಪ್ರೊ.ರಹಮತ್ ತರೀಕೆರೆ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರದ ವತಿಯಿಂದ ಮೈವಿವಿ ಸಂಜೆ ಕಾಲೇಜಿನಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಅಂಬೇಡ್ಕರ್ ಬರಹಗಳು: ಸಾಂಸ್ಕೃತಿಕ ವಿಶ್ಲೇಷಣೆ’ ಕುರಿತು ಮಾತನಾಡಿದರು.
ಅಂಬೇಡ್ಕರ್ ಚರಿತ್ರೆಯಲ್ಲಿ ಸಾಹುಮಹಾರಾಜರು, ಸಯ್ಯಜಿರಾವ್ ಗಾಯಕವಾಡ್, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಮುಖ ಪಾತ್ರ ವಹಿಸುವುದರೊಂದಿಗೆ ಸ್ಫೂರ್ತಿದಾಯಕರಾಗಿದ್ದರು. ಇವರೆಲ್ಲರೂ ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವವಾದಿಗಳಾದವರು. ಜ್ಯೋತಿರಾವ್ ಫುಲೆ ಅವರಿಂದಲೂ ಅಂಬೇಡ್ಕರ್ ಪ್ರಭಾವಿತರಾಗಿದ್ದರು ಎಂದರು.
ಈ ರಾಜರೆಲ್ಲ ರಾಜಪ್ರಭುತ್ವದಲ್ಲೇ ಪ್ರಜಾಪ್ರಭುತ್ವದ ಕೆಲಸ ಮಾಡಿದರು. ಸಮಾಜ ಸುಧಾರಣೆ ಮಾಡಿದ ಇವರು, ಆಧುನಿಕ ಶಿಕ್ಷಣ ಜಾರಿಗೆ ತಂದವರು. ಆಧುನಿಕ ನಗರ ನಿರ್ಮಾಣಕ್ಕೂ ಬುನಾದಿ ಹಾಕಿದರು.
ಇದೆಲ್ಲವೂ ಮುಂದೆ ದೇಶದ ಸುಧಾರಣೆ ಪ್ರೇರಣೆಯಾಯಿತು ಎಂದರು.
ಮಹಿಳೆಯರ, ಹೆಣ್ಣು ಮಕ್ಕಳ, ದಲಿತರ ವಿಮೋಚನೆಗಾಗಿ ಕೆಲಸ ಮಾಡಿದ ಈ ರಾಜರು, ಶಿಕ್ಷಣ ರಹದಾರಿ ಮೂಲಕ ಸಮಾಜ ಪರಿವರ್ತನೆಗೆ ಅಡ್ಡಿಗಲ್ಲು ಹಾಕಿದರು. ಆದರೆ, ಸಮಾಜ ಶುದ್ಧೀಕರಣ ಕೆಲಸದಿಂದ ಈ ರಾಜರು ಸಾಂಪ್ರದಾಯಿಕವಾದಿಗಳ ತೀವ್ರ ವಿರೋಧ ಕಟ್ಟಿಕೊಟ್ಟರು. ಇದರಿಂದ ಗಾಯಕವಾಡರು ಮೃದುವಾದರೆ, ನಾಲ್ವಡಿಯವರು ದಿಟ್ಟತನ ಪ್ರದರ್ಶಿಸಿದರು ಎಂದು ವಿಶ್ಲೇಷಿಸಿದರು.
ಸಾಹುಮಹಾರಾಜರಿಗೆ ಬಾಲಗಂಗಾಧರ ತಿಲಕರು ತೀವ್ರ ಪ್ರತಿರೋಧವೊಡ್ಡಿ ತೊಂದರೆ ಕೊಟ್ಟವರು. ಇದಕ್ಕಾಗಿ ಕೇಸರಿ ಪತ್ರಿಕೆಯನ್ನು ಬಳಸಿಕೊಂಡರು. ಇದನ್ನು ಮನಗಂಡ ಅಂಬೇಡ್ಕರ್ ಉಗ್ರನಾಯಕ ಪತ್ರಿಕೆಯನ್ನು ಹೊರ ತಂದರು ಎಂದರು.
ಪ್ರಾಂಶುಪಾಲ ಪ್ರೊ.ವಿ.ಷಣ್ಮುಗಂ, ಅಂಬೇಡ್ಕರ್ ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್, ಗಾಂಧಿ ಅಧ್ಯಯನ ಕೇಂದ್ರ ಡಾ.ಎಸ್.ನರೇಂದ್ರಕುಮಾರ್ ಇದ್ದರು