ಅಂಬೇಡ್ಕರ್ ವಿಚಾರಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ : ಬಿ. ಶ್ರೀರಾಮುಲು

DSC_6496
Published on

ಮೈಸೂರು: ಸಮಾಜದ ಕಟ್ಟ ಕಡೆಯ ಪ್ರಜೆಗೂ ಸಂವಿಧಾನದ ಆಶಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಅಧಿಕಾರ ನಡೆಸುತ್ತೇನೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೇಂದ್ರದ ಜಾಲತಾಣ ಲೋಕಾರ್ಪಣೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜ್ಞಾನದ ದೀಪದಂತೆ ಇರುವ ಅಂಬೇಡ್ಕರ್ ಅವರನ್ನು ಜೀವನ ಪೂರ್ತಿ ನೆನಪಿಸಿಕೊಳ್ಳಬೇಕು. ಆದರೆ, ಕೆಲ ರಾಜಕಾರಣಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಬಳಕೆ ಮಾಡಿಕೊಂಡು ನಂತರ ಅವರ ವಿಚಾರಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ. ಅವರ ಆಶಯಗಳನ್ನು ಎಲ್ಲರಿಗೂ ತಲುಪಿಸುವಲ್ಲಿ ಸೋತಿದ್ದಾರೆ. ಸಂವಿಧಾನದ ಮುಖ್ಯ ಆಶಯಗಳನ್ನು ಮರೆತಿದ್ದಾರೆ. ಹಾಗಾಗಿ, ನಾನು ಸಂವಿಧಾನವನ್ನು ತಲೆ ಮೇಲೆ ಹೊತ್ತುಕೊಂಡು ಕೆಲಸ ಮಾಡುತ್ತೇನೆ. ಸಂವಿಧಾನದ ಆಶಯದಂತೆ ದೀನ ದಲಿತರ, ಗಿರಿಜನರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ದುಡಿಯುತ್ತೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರನ್ನು ಜ್ಞಾನದ ದೀಪ ಎಂದಿದ್ದಾರೆ. ತಾವು ಪ್ರಧಾನಿಯಾಗಿರಲು ಅಂಬೇಡ್ಕರ್ ಅವರೇ ಕಾರಣ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಅಂಬೇಡ್ಕರ್ ಅವರನ್ನು ವಿಶ್ವದಾದ್ಯಂತ ಸ್ಮರಿಸುವಂತೆ ಮಾಡಿದ್ದಾರೆ ಎಂದರು.

ಇತ್ತೀಚೆಗೆ ರಾಜ್ಯದಲ್ಲಿ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು ಅವುಗಳಿಗೆ ಶಿಕ್ಷೆ ನೀಡುವ ಪ್ರಮಾಣ ಕಡಿಮೆಯಾಗಿದೆ. 10,000 ಪ್ರಕರಣಗಳಲ್ಲಿ ಶೇ.3 ರಷ್ಟಕ್ಕೆ ಮಾತ್ರ ಶಿಕ್ಷೆಯಾಗಿದೆ. ಅಧಿಕಾರಿಗಳು ಗೋಲ್‌ಮಾಲ್ ಮಾಡಿ ಮಧ್ಯವರ್ತಿಗಳ ಮುಖಾಂತರ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕಾಗಿ 2 ಕೋಟಿ ರೂ. ಅನುದಾನ ಕೊಡಲು ಪ್ರಯತ್ನಿಸುತ್ತೇನೆ ಎಂದರು.

ಒಡಿಶಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ‘ಸಂವಿಧಾನದ ಆಶಯಗಳು: ವರ್ತಮಾನದೊಂದಿಗೆ ಮುಖಾಮುಖಿ’ ಎಂಬ ವಿಷಯದ ಕುರಿತು ಆನ್‌ಲೈನ್‌ನಲ್ಲಿ ಮಾತನಾಡಿ, ಸರ್ಕಾರ ಲವ್ ಜಿಹಾದ್ ತಡೆಗಟ್ಟುವ ನೆಪದಲ್ಲಿ ಯುವಕ-ಯುವತಿಯರ ವಿವಾಹದಲ್ಲಿನ ಆಯ್ಕೆ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದು ಮೂಲಭೂತ, ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ ಇದನ್ನು ಜಾರಿಗೆ ತರುವಲ್ಲಿ ಶಾಸಕಾಂಗ ತನ್ನ ಮಿತಿಯನ್ನು ಮೀರಬಾರದು. ಇಲ್ಲವಾದಲ್ಲಿ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದರು.

ಕುಲಪತಿ ಪ್ರೊ.ಹೇಮಂತ್‌ಕುಮಾರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದಲ್ಲಿ ಗ್ರಂಥಾಲಯ, ದಲಿತ ದಾಖಲೀಕರಣ ಕೇಂದ್ರ ಹಾಗೂ ವಸ್ತುಸಂಗ್ರಹಾಲಯ ಸ್ಥಾಪನೆಗೆ 6.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಈ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡುವಂತೆ ಸಚಿವ ಶ್ರೀರಾಮುಲು ಅವರಿಗೆ ಕೋರಿದರು.

ಶಾಸಕ ಎಲ್.ನಾಗೇಂದ್ರ, ಕುಲಸಚಿವ ಪ್ರೊ.ಆರ್. ಶಿವಪ್ಪ, ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್ ಇತರರಿದ್ದರು.

ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್

ಮೈಸೂರು ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಸದ್ಯದಲ್ಲೇ ಲ್ಯಾಪ್‌ಟಾಪ್ ನೀಡಲು ಕ್ರಮ ಕೈಗೊಳ್ಳುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದರು.

ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆ ನನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಶ್ರೀರಾಮುಲು, ಅಂದಾಜು 300 ವಿದ್ಯಾರ್ಥಿಗಳು ಸಂಶೋಧನೆ ನಡೆಸುತ್ತಿದ್ದು, ಈ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲು ಕ್ರಮ ಜರುಗಿಸಲಾಗುವುದು. ಇದಕ್ಕಾಗಿ ತಗಲುವ ಅಂದಾಜು 1.25 ಕೋಟಿ ರೂ.ಗಳನ್ನು ಕೂಡಲೇ ಮಂಜೂರು ಮಾಡಲು ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net