ಅಂಬೇಡ್ಕರ್ ಭಾವಚಿತ್ರ ತೆರವು: ಅಹೋರಾತ್ರಿ ಧರಣಿ ಮುಕ್ತಾಯ

mysore
Published on

ಮೈಸೂರು: ಅಂಬೇಡ್ಕರ್ ಭಾವಚಿತ್ರ ಇರುವ ಬ್ಯಾನರ್ ತೆರವುಗೊಳಿಸಿದವರ ಅಮಾನತಿಗೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಮುಕ್ತಾಯಗೊಂಡಿದೆ.

ಸಂಘಟನೆಯ ವತಿಯಿಂದ ಅಂಬೇಡ್ಕರ್ ಜಯಂತಿಗೆ ಶುಭಕೋರಿ ಅಳವಡಿಸಿದ್ದ ಬ್ಯಾನರ್ ಅನ್ನು ಬುಧವಾರ ಸಂಜೆ ಆಡಳಿತ ಮಂಡಳಿ ಸಿಬ್ಬಂದಿ ತೆರವುಗೊಳಿಸಿದ್ದರು. ಇದನ್ನು ಖಂಡಿಸಿ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದರು.

ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಆಡಳಿತಾಧಿಕಾರಿ ರಾಮಚಂದ್ರ ವಿರುದ್ಧ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಗುರುವಾರವೂ ಪ್ರತಿಭಟನೆ ಮುಂದುವರಿಸಿದ್ದರು.

ಮೈಸೂರು ವಿವಿ ಕ್ಯಾಂಪಸ್ ಆಗಿರುವ ಮಾನಸಗಂಗೋತ್ರಿ ಬಂದ್‌ಗೆ ಮುಂದಾದರು. ಕುಲಪತಿಯು ಬ್ಯಾನರ್ ತೆರವಿಗೆ ಕಾರಣರಾದ ಆಡಳಿತಾಧಿಕಾರಿ ರಾಮಚಂದ್ರ ಹಾಗೂ ವಿಶೇಷಾಧಿಕಾರಿ ಕುಮಾರ್‌ನನ್ನು ಆ ಸ್ಥಾನದಿಂದ ವಜಾಗೊಳಿಸಿದರೂ, ಪ್ರತಿಭಟನಾಕಾರರು ಅವರ ಅಮಾನತಿಗೆ ಆಗ್ರಹಿಸಿದ್ದರು.

ರಾತ್ರಿಯಿಡೀ ಪ್ರತಿಭಟನೆ ನಡೆಸಿದರು. ಶುಕ್ರವಾರ ಬ್ಯಾನರ್ ತೆರವುಗೊಳಿಸಿದ್ದ ಸ್ಥಳದಲ್ಲೇ ಹೊಸ ಬ್ಯಾನರ್ ಅಳವಡಿಸಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net