ಅಂಬೇಡ್ಕರ್ ಭಾರತೀಯರ ಆಸ್ತಿ

mdg ambed
ಗೋಣಿಬೀಡಿನಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಿಪಿಐಎಂಎಲ್ ರಾಜ್ಯಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿದರು. ಜಿ.ಎಸ್.ದಿನೇಶ್, ಸುಂದರೇಶ್, ಅಂಗಡಿ ಚಂದ್ರು, ಲಕ್ಷ್ಮಣ್, ಬಸವರಾಜ್, ರಾಜೇಶ್, ಕೃಷ್ಣಪ್ಪ ಇತರರಿದ್ದರು.
Published on

ಮೂಡಿಗೆರೆ: ಅಂಬೇಡ್ಕರ್ ಭಾರತೀಯರ ಆಸ್ತಿ. ಅವರು ಯಾವುದೇ ಜಾತಿ, ಧರ್ಮ, ವರ್ಗ, ಪಂಗಡಕ್ಕೆ ಸೇರಿದವರಲ್ಲ. ಭಾರತೀಯರ ಪರವಾಗಿ ದುಡಿದ ಮಹಾನ್ ನಾಯಕ. ಆದರೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಿ ವಿಕೃತಿ ಮೆರೆಯುತ್ತಿವೆ ಎಂದು ಗ್ರಾಪಂ ಅಧ್ಯಕ್ಷ ಜಿ.ಎಸ್.ದಿನೇಶ್ ಹೇಳಿದರು.

ಶುಕ್ರವಾರ ಗೋಣಿಬೀಡಿನಲ್ಲಿ ಕಾರ್ಮಿಕ ಸಂಘಟನೆ, ವಸತಿಗಾಗಿ ಹೋರಾಟ ವೇದಿಕೆ ಹಾಗೂ ರೈತ ಸಂಘದಿಂದ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ ಆಚರಣೆಯಲ್ಲಿ ಮಾತನಾಡಿ, ಅಂಬೇಡ್ಕರ್ ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದ್ದಾರೆ. ಅವರ ಆದರ್ಶವನ್ನು ಮೈಗೂಡಿಸಿಕೊಂಡರೆ ಜಾತಿ, ಮತ, ಧರ್ಮಗಳ ನಡುವೆ ಸಾಮರಸ್ಯದಿಂದ ಬದುಕಬೇಕಾಗುತ್ತದೆ. ಆಗ ಮಾತ್ರ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುಂದರೇಶ್ ಮಾತನಾಡಿ, ಯುವಜನತೆ ದಾರಿ ತಪ್ಪುತ್ತಿದ್ದಾರೆ. ಅವರನ್ನು ಸರಿದಾರಿಗೆ ತರುವ ಕೆಲಸ ಆಗಬೇಕಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ದಲಿತರು ಮತ್ತು ಬಡವರ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ತಿಳಿಸಿದರು.

ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ಅಂಬೇಡ್ಕರ್ ಎಂದರೆ ಜ್ಞಾನ. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಮಾತ್ರವಲ್ಲದೆ ರಾಜಕಾರಣಿ, ಸಮಾಜ ಶಾಸ್ತ್ರಜ್ಞ, ಆರ್ಥಿಕ ತಜ್ಞ, ಕಾನೂನು ಪಂಡಿತ, ಕಾರ್ಮಿಕ ನಾಯಕ. ಜಗತ್ತಿನ ಕಾರ್ಮಿಕ ಕಾಯ್ದೆಗಳನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಕಾರ್ಮಿಕರ ಹಕ್ಕು ಮತ್ತು ಸ್ವಾತಂತ್ರ್ಯ ಎತ್ತಿಹಿಡಿದ ಕಾರ್ಮಿಕ ನಾಯಕ ಎಂದು ತಿಳಿಸಿದರು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರು, ಬಿಎಸ್ಪಿ ಮುಖಂಡ ಲಕ್ಷ್ಮಣ್, ರೈತ ಸಂಘದ ಬಸವರಾಜ್, ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷ ರಾಜೇಶ್, ಗ್ರಾಪಂ ಸದಸ್ಯ ಕೃಷ್ಣಪ್ಪ, ನಾಗೇಶ್ ಸಾಲುಮರ, ಹೊನ್ನಯ್ಯ, ಬಿ.ಕೆ.ಗೋಪಾಲ್, ಗಿರೀಶ್, ಮಂಜು, ಯಶೋದಾ, ಜಾನಕಿ, ಮಂಜುಳಾ, ಮೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net