ಅಂಬೇಡ್ಕರ್ ಭವನದ ಬಾಕಿ ಕಾಮಗಾರಿ ಅಂತು ಇಂತೂ ಶುರು

mysore
Published on

ಮೈಸೂರು: ನಗರದ ದೇವರಾಜ ಪೊಲೀಸ್ ಠಾಣೆ ಬಳಿ ಅರೆಬರೆಯಾಗಿ ನಿಂತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಬಾಕಿ ಕಾಮಗಾರಿ ಅಂತು ಇಂತೂ ಶುರುವಾಗಿದೆ.

ನನೆಗುದಿಗೆ ಬಿದ್ದಿರುವ ಈ ಭವನವನ್ನು ಪೂರ್ಣಗೊಳಿಸುವ 23.83 ಕೋಟಿ ರೂ.ವೆಚ್ಚದ ಮುಂದುವರಿದ ಕೆಲಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಶನಿವಾರ ಚಾಲನೆ ನೀಡಿದರು. ಇದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆಯನ್ನೂ ನೀಡಿದರು.

ಕಾಮಗಾರಿ ಮೊತ್ತ ಏರಿಕೆ:

2012ರ ಮೇ 4ರಂದು ಅಂಬೇಡ್ಕರ್ ಭವನ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಮೂರು ತಿಂಗಳ ಬಳಿಕ ಕಾರ್ಯಾದೇಶ ನೀಡಲಾಯಿತು. 14.66 ಕೋಟಿ ರೂ.ಅಂದಾಜು ಮೊತ್ತ ಕಾಮಗಾರಿಯಲ್ಲಿ 13.50 ಕೋಟಿ ರೂ.ಗೆ ಟೆಂಡರ್ ನೀಡಲಾಯಿತು.

ಬೇಸ್‌ಮೆಂಟ್, ನೆಲ ಅಂತಸ್ತು, ಮೊದಲ ಅಂತಸ್ತು, 2ನೇ ಅಂತಸ್ತು ಒಳಗೊಂಡ ಕಟ್ಟಡದಲ್ಲಿ ಈಗಾಗಲೇ 2500 ಜನರಿಗೆ ಸ್ಥಳಾವಕಾಶ, ಗ್ರಂಥಾಲಯ, 2 ಗ್ರೀನ್ ರೂಮ್, 2 ವಿಶ್ರಾಂತಿ ಕೊಠಡಿ, ಶೌಚಗೃಹ, ಬೇಸ್‌ಮೆಂಟ್‌ನಲ್ಲಿ 75 ಕಾರು, 350 ಬೈಕ್ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ.

ಈ ಕಟ್ಟಡಕ್ಕೆ ಈಗಾಗಲೇ 11.82 ಕೋಟಿ ರೂ.ವೆಚ್ಚವಾಗಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಹಿಂದಿನ ಮುಡಾ) 4.66 ಕೋಟಿ ರೂ., ಪಾಲಿಕೆ 3 ಕೋಟಿ ರೂ., ಜಿಪಂ 50 ಲಕ್ಷ ರೂ., ಸಮಾಜ ಕಲ್ಯಾಣ ಇಲಾಖೆ 6.50 ಕೋಟಿ ರೂ.ಸೇರಿದಂತೆ 14.66 ಕೋಟಿ ರೂ. ಒದಗಿಸಲಾಗಿದೆ. ಈ ಪೈಕಿ ಜಿಪಂ ಇನ್ನೂ 37.11ಲಕ್ಷ ರೂ.ಬಾಕಿ ಉಳಿಸಿಕೊಂಡಿದೆ. ಕಾಮಗಾರಿ ವಿಳಂಬದಿಂದ ಯೋಜನಾ ವೆಚ್ಚ ಏರಿಕೆಯಾಗಿದ್ದು, ಕಾಮಗಾರಿ ಮೊತ್ತ 38.49 ಕೋಟಿ ರೂ.ಹೆಚ್ಚಳವಾಗಿದೆ.

ಭವನದ ಕಾಮಗಾರಿ ಪೂರ್ಣಗೊಳಿಸಲು ದಲಿತ ಸಂಘರ್ಷ ಸಮಿತಿಯಿಂದ ಅನೇಕ ಹೋರಾಟ, ಮನವಿ ಸಲ್ಲಿಕೆ, ಪ್ರತಿಭಟನೆಗಳು ನಡೆದಿವೆ. ಇದರ ಫಲವಾಗಿ ಈಗ ಕಾಮಗಾರಿ ಮರು ಆರಂಭಗೊಂಡಿದೆ.

ಬಾಕಿ ಕೆಲಸ ಏನು?

ಬಾಕಿ ಕಾಮಗಾರಿಗೆ ಮೇ 16ರಂದು ಅನುಮೋದನೆ ನೀಡಲಾಗಿದೆ. ಕಾರ್ಕಳದ ಎಸ್‌ಕೆಎಸ್ ಕಾರ್ಕಳ ಇನ್ಫ್ರಾ ಪ್ರೊಜೆಕ್ಟ್ ಕಂಪನಿಗೆ ಗುತ್ತಿಗೆ ವಹಿಸಲಾಗಿದೆ. ಇನ್ನೂ ಸಿವಿಲ್ ವರ್ಕ್ಸ್‌ನಲ್ಲಿ ಫ್ಲೋರಿಂಗ್, ರೋಡ್ ಸಂಪ್, ಶೌಚಗೃಹ, ಎಲೆಕ್ಟ್ರಿಕಲ್ ಕೆಲಸ, ನೆಲಹಾಸಿಗೆ ಗ್ರಾನೈಟ್, ಆಡಿಟೋರಿಯಂ ಸುತ್ತಲೂ ಗೋಡೆ, ಗ್ಯಾಲರಿ ಮೆಟ್ಟಿಲುಗಳಿಗೆ ಕಾಂಕ್ರೀಟ್, ರ‌್ಯಾಂಪ್, ಗೇಟ್‌ಗಳ ಅಳವಡಿಕೆ, ಬಣ್ಣ, ಆವರಣದಲ್ಲಿ ರಸ್ತೆ ನಿರ್ಮಾಣ, ಯಜಿಸಿ, ಮಳೆ ನೀರು ಕೊಯ್ಲು, ವೇದಿಕೆ, ಒಳಾಂಗಣದ ವಿದ್ಯುದ್ಧೀಕರಣ, ಹವಾನಿಯಂತ್ರಿತ ವ್ಯವಸ್ಥೆ, ಧ್ವನಿವರ್ಧಕ ವ್ಯವಸ್ಥೆ, 1800 ಆಸನಗಳ ವ್ಯವಸ್ಥೆ, 2 ಲಿಫ್ಟ್ ಅಳವಡಿಕೆ ಸೇರಿದಂತೆ ಇತರ ಕಾಮಗಾರಿಗಳನ್ನು ಮಾಡಬೇಕಿದೆ.

ವರ್ಷದೊಳಗೆ ಪೂರ್ಣ:

ಭವನದ ಮುಂದುವರಿದ ಕಾಮಗಾರಿ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಭವನ ನಿರ್ಮಾಣದಲ್ಲಿ ನಿರ್ಲಕ್ಷೃ ಮಾಡಿಲ್ಲ. ಆದರೆ, ವಿಳಂಬವಾಗಿದೆ. ಇದೀಗ ಎಲ್ಲದರಲ್ಲೂ ತೆರೆಬಿದ್ದಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಶೇ.18ರ ಅನುದಾನವನ್ನು ಈ ಕಾಮಗಾರಿಗೆ ಬಳಸಿಕೊಳ್ಳಲಾಗುತ್ತಿದೆ. ವರ್ಷದೊಳಗೆ ಕೆಲಸ ಪೂರ್ಣಗೊಳ್ಳಲಿದೆ. ಬಳಿಕ ಇದು ಸಾಂಸ್ಕೃತಿಕ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದರು.

ಅಂಬೇಡ್ಕರ್ ಅವರು ಮೂರ್ತಿ ಪೂಜೆಯನ್ನು ವಿರೋಧಿಸಿದವರು. ಅಂಬೇಡ್ಕರ್ ಅವರನ್ನು ಅರಿಯಬೇಕಾದರೆ ಸಂವಿಧಾನ ಅಧ್ಯಯನ ಮಾಡಿ, ಅದರ ಆಶಯಗಳನ್ನು ತಿಳಿದರೆ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಮೇಲೆ ಕೋಮುವಾದಿ, ಮತೀಯವಾದಿಗಳು ಸವಾರಿ ನಡೆಯುತ್ತಿದೆ. ಆದರೆ, ದೇಶದ ಸಂವಿಧಾನ ಗಟ್ಟಿಯಾಗಿದ್ದು, ಸಮ ಸಮಾಜ ನಿರ್ಮಾಣ, ದೇಶದ ಅಭಿವೃದ್ಧಿ, ಏಕತೆ ಹಾಗೂ ಬಹುತ್ವದ ರಕ್ಷಣೆ ನಡೆಯುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಶಿವಕುಮಾರ್ ಮಾತನಾಡಿ, ಅಂಬೇಡ್ಕರ್ ಅವರು ಹೆಣ್ಣು ಮಕ್ಕಳ ಹಕ್ಕಿಗಾಗಿ ಹೋರಾಡಿ ಎಲ್ಲ ಕ್ಷೇತ್ರಗಳಲ್ಲೂ ಅವಕಾಶ ಕಲ್ಪಿಸುವಂತೆ ಸಂವಿಧಾನದ ಮೂಲಕ ಹಕ್ಕು ನೀಡಿದ್ದಾರೆ. ಅಂಬೇಡ್ಕರ್ ಎಂಬ ಶಕ್ತಿ ಇಂದು ಇಡೀ ಜಗತ್ತಿನಲ್ಲಿ ಚರ್ಚೆಯಲಿದ್ದು, ಅವರನ್ನು ಓದುವುದು ಮತ್ತು ಪರಾಮರ್ಶೆ ಮಾಡಲಾಗುತ್ತಿದೆ. ಆದ್ದರಿಂದ ಯಾವ ಶಕ್ತಿಗಳಿಂದಲೂ ಸಂವಿಧಾನ ನಾಶ ಮಾಡಲು ಸಾಧ್ಯವಿಲ್ಲ ಎಂದರು.

ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಇದು ಜಾಗೃತಿ, ಜ್ಞಾನದ ಕೇಂದ್ರವಾಗಬೇಕು. ಭವನ ತುರ್ತು ಅಗತ್ಯ ಇದೆ. ಕೆಲಸ ಪೂರ್ಣಗೊಂಡು ತ್ವರಿತವಾಗಿ ಉದ್ಘಾಟನೆಯಾಗಬೇಕು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿ ರಚನೆ ಮಾಡಬೇಕು. ಐಎಎಸ್, ಐಪಿಎಸ್ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ತರಬೇತಿ ನೀಡುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.

ಗ್ಯಾರಂಟಿ ಯೋಜನೆ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಕ್ಷಿತ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ ಅವರು, ಮಾಜಿ ಮೇಯರ್ ಪುರುಷೋತ್ತಮ ಇನ್ನಿತರರಿದ್ದರು.

ನಿವೇಶನ ಪತ್ರ ವಿತರಣೆ

ಯುದ್ಧದಲ್ಲಿ ಹುತಾತ್ಮರಾದ ಮತ್ತು ಅಂಗವೈಕಲ್ಯರಾದ ಯೋಧರು, ಕುಟುಂಬದವರಿಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿವೇಶನ ಮಂಜೂರು ಮಾಡಲಾಗಿದ್ದು, ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸುಬೇದಾರ್ ಪಿ.ಬಿ.ಸುಬ್ರಮಣಿ, ನಾಯ್ಕ ಕೆ.ಎಸ್‌ರಾಧಾಕೃಷ್ಣ, ಆರ್ಡಿನರಿ ನಾಯ್ಕ ಸುಬೇದಾರ್ ಎಸ್.ಪಿ.ದೇವರಾಜು, ಭೂ ಸೇನೆ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್, ನಾಯ್ಕ ಬಿ.ಎನ್.ಕಿರಣ್ ಕುಮಾರ್, ಹಮಲ್ದಾರ್ ಬಿ.ರಮೇಶ, ಸಿಟಿಜಿಡಿ ಎಚ್.ಗುರು ಕುಟುಂಬದವರಿಗೆ ನಿವೇಶನ ಮಂಜೂರಾತಿ ಪತ್ರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net