

ಮೈಸೂರು: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿಯನ್ನು ಪೂರ್ಣಗೊಳಿಸಿ ಆದಷ್ಟು ಬೇಗ ಲೋಕಾರ್ಪಣೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗುರುವಾರ ಪರಿಶೀಲನೆ ಮಾಡಿದರು. ಈ ವೇಳೆ ಕಟ್ಟಡ ಪೂರ್ಣಗೊಳಿಸುವ ವಿಚಾರವಾಗಿ ಕೆಲಹೊತ್ತು ಸಂಸದ ವಿ.ಶ್ರೀನಿವಾಸಪ್ರಸಾದ್ ಅವರೊಂದಿಗೆ ಸಮಾಲೋಚನೆ ಮಾಡಿದರು.
ಸ್ಥಗಿತಗೊಂಡಿರುವ ಈ ಕಾಮಗಾರಿ ಮುಕ್ತಾಯಗೊಳಿಸಲು ಸ್ಥಳಿಯ ಶಾಸಕರು, ಜಿಲ್ಲಾ ಮಂತ್ರಿಯವರು 16 ಕೋಟಿ ರೂ.ನೀಡುವಂತೆ ಪ್ರಸ್ತಾವನೆ ಇಟ್ಟಿದ್ದು, ಶೀಘ್ರದಲ್ಲೇ ಸಚಿವ ಸಂಪುಟದಲ್ಲಿ ಈ ವಿಚಾರವಾಗಿ ಚರ್ಚಿಸಿ ಅನುದಾನ ಬಿಡುಗಡೆ ಮಾಡಲಾಗುವುದು. ನಿಂತಿರುವ ಕೆಲಸಕ್ಕೆ ಚಾಲನೆ ನೀಡಿ ತ್ವರಿತವಾಗಿ ಕಾಮಗಾರಿಯನ್ನು ಮುಗಿಸಿ ಕಟ್ಟಡವನ್ನು ಉದ್ಘಾಟಿಸಲಾಗುವುದು ಎಂದರು.
ಶಾಸಕರಾದ ಹರ್ಷವರ್ಧನ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಇನ್ನಿತರರಿದ್ದರು.