

ಹಾಸನ: ಚಂದ್ರಗುಪ್ತ ಮೌರ್ಯ ದಲಿತ ಹೋರಾಟಗಾರರ ಒಕ್ಕೂಟದ ವತಿಯಿಂದ ಕೆ.ಗೋಪನಹಳ್ಳಿ ಅಲೆಮಾರಿ ಹಂದಿ ಜೋಗಿ ಕಾಲೋನಿಗೆ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಲು 1 ಎಕರೆ ಜಾಗವನ್ನು ಮಂಜೂರು ಮಾಡಿಕೊಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಬಳಿಕ ಒಕ್ಕೂಟದ ಜಿಲ್ಲಾಧ್ಯಕ್ಷ ವಿಜಯಕುಮಾರ ಬಾಗಿವಾಳು ಮಾತನಾಡಿ, ಹೊಳೆನರಸೀಪುರ ತಾಲೂಕು, ಹಳ್ಳಿ ಮೈಸೂರು ಹೋಬಳಿ, ಕೆ.ಗೋಪನಹಳ್ಳಿ (ಕೆರೆಗೋಡು ದಾಖಲೆ) ಗ್ರಾಮದಲ್ಲಿ ಅಲೆಮಾರಿ ಹಂದಿ ಜೋಗಿ ಜನಾಂಗದ ಸುಮಾರು 30 ಕುಟುಂಬಗಳು ವಾಸವಾಗಿದ್ದು, ಸದರಿ ಹಂದಿ ಜೋಗಿ ಕಾಲೋನಿಯ ದಲಿತ ಸಮುದಾಯದವರು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು, ಮನರಂಜನೆ, ಹಬ್ಬ-ಹರಿದಿನ, ಮದುವೆ ಮುಂತಾದ ಕಾರ್ಯಕ್ರಮಗಳನ್ನು ಮತ್ತು ಸಮಾರಂಭಗಳನ್ನು ಮಾಡಲು ಜನರಿಗೆ ಜಾಗ ಅಥವಾ ಭವನ ಇಲ್ಲ. ಹೀಗಾಗಿ ಅವರು ರಸ್ತೆಗಳಲ್ಲಿ ಮತ್ತು ಬೀದಿಗಳಲ್ಲಿ ಸಮಾರಂಭಗಳನ್ನು ಮಾಡುತ್ತಿದ್ದಾರೆ. ಇದರಿಂದ ಕಾಲೋನಿಯ ದಲಿತರು ತುಂಬಾ ತೊಂದರೆ ಅನುಭವಿಸುತ್ತಿರುತ್ತಾರೆ ಎಂದು ತಿಳಿಸಿದರು.
ಆದ್ದರಿಂದ ಕೆರಗೋಡು ಗ್ರಾಮದ ಸರ್ವೆ ನಂಬರ್ 46ರಲ್ಲಿ 5 ಎಕ್ಕರೆ 17 ಗುಂಟೆ ಸರ್ಕಾರಿ ಗೋಮಾಳ ಜಾಗವಿದ್ದು ಅಲೆಮಾರಿ ಹಂದಿ ಜೋಗಿ ಕಾಲೋನಿಗೆ ಹೊಂದಿಕೊಂಡಿದೆ. ಈ ಜಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ಉದ್ಯಾನವನ ನಿರ್ಮಾಣ ಮಾಡಲು 1 ಎಕರೆ ಜಾಗವನ್ನು ಮಂಜೂರು ಮಾಡಿಕೊಡಬೇಕೆಂದು ಆಗ್ರಹಿಸಿ ಸಿಜಿಎಂ ದಲಿತ ಹೋರಾಟಗಾರರ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಹುಳವಾರೆ, ಜಿಲ್ಲಾ ಕಾರ್ಯಧ್ಯಕ್ಷ ಎಂ.ವಿ.ಗೋವಿಂದರಾಜು, ಎಸ್.ಎಸ್. ರಂಗಸ್ವಾಮಿ, ಚಂದ್ರಶೇಖರ್ ಸಾಣೆನಹಳ್ಳಿ, ಕೇಶವಣ್ಣ ಮುಸವತ್ತೂರು, ಪ್ರಸನ್ನಕುಮಾರ, ಮತ್ತು ಗ್ರಾಮಸ್ಥರಾದ ಮಂಜುನಾಥ್, ಹರೀಶ, ಗೋವಿಂದರಾಜು, ಜಯಣ್ಣ ಮುಂತಾದವರು ಉಪಸ್ಥಿತರಿದ್ದರು.