

ಹನಗೋಡು: ಅಂಬೇಡ್ಕರ್ ಭವನ ನಿರ್ಮಾಣದ ವೆಚ್ಚ ಎರಡು ಪಟ್ಟು ಹೆಚ್ಚಾಗಿದ್ದು, ಸರ್ಕಾರ ಅನುದಾನ ನೀಡದಿದ್ದರೂ ಕಟ್ಟಡ ನಿರ್ಮಾಣದ ಜವಾಬ್ದಾರಿ ಹೊರುತ್ತೇನೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಹೇಳಿದರು.
ಹೋಬಳಿಯ ಚಿಲ್ಕುಂದ ಗ್ರಾಮದಲ್ಲಿ ಗುರುವಾರ ಅಂಬೇಡ್ಕರ್ ಭವನಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಭವನ ನಿರ್ಮಾಣಕ್ಕೆ ಅನುದಾನವನ್ನು ಸರ್ಕಾರ ಸಕಾಲದಲ್ಲಿ ಬಿಡುಗಡೆ ಮಾಡಿದ್ದರೆ ಗ್ರಾಮದಲ್ಲಿ ಉತ್ತಮ ಕಟ್ಟಡ ನಿರ್ಮಾಣವಾಗುತ್ತಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ 50 ಲಕ್ಷ ರೂ. ಗಳನ್ನು ಇಂದಿನ ಸರ್ಕಾರ ಬಿಡುಗಡೆ ಮಾಡುವ ಮನಸ್ಸು ಮಾಡದ ಪರಿಣಾಮ ಈಗ ಭೂಮಿಪೂಜೆ ನೆರವೇರಿಸುವ ಪರಿಸ್ಥಿತಿ ಎದುರಾಗಿದೆ ಎಂದರು.
ಅಂದು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಬಹುದಾಗಿದ್ದ ಕಟ್ಟಡ ಈಗ ಒಂದು ಕೋಟಿ ರೂ.ತಲುಪಿದೆ. ಈ ವ್ಯತ್ಯಾಸದ ಹಣವನ್ನು ವೈಯಕ್ತಿಕವಾಗಿ ಸಂಗ್ರಹಿಸಿ ನೀಡಲು ಬದ್ಧ ಎಂದರು.
ಹುಣಸೂರು ತಾಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರು ಸ್ಪಂದಿಸುತ್ತಿಲ್ಲ ಎಂದು ವಿರೋಧ ಪಕ್ಷದವರು ಟೀಕಿಸುತ್ತಾರೆ. ಟೀಕೆ ಮಾಡುವುದು ಸುಲಭ. ಆದರೆ ಯೋಜನೆಗಳ ಅನುಷ್ಠಾನ ಮತ್ತು ಸರ್ಕಾರದಿಂದ ಅನುದಾನ ತರುವುದು ಸುಲಭವಲ್ಲ. ಉಪಚುನಾವಣೆ ಯಲ್ಲಿ ಆಯ್ಕೆಗೊಂಡ ಬಳಿಕ ಕೋವಿಡ್ ಸಂಕಷ್ಟ ಎದುರಾಯಿತು. ಈ ನಡುವೆ ಪ್ರಕೃತಿ ವಿಕೋಪದಲ್ಲಿ ಆಸ್ತಿ ನಷ್ಟವಾಯಿತು. ಸಿಕ್ಕ ಅಲ್ಪ ಸಮಯದಲ್ಲಿ ಸಾರ್ವಜನಿಕರ ಸೇವೆಯನ್ನು ವಿರೋಧ ಪಕ್ಷದಲ್ಲಿ ಕುಳಿತು ಮಾಡಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿಸಿದರು. ಚಿಲ್ಕುಂದ ಗ್ರಾ.ಪಂ ಅಧ್ಯಕ್ಷೆ ಗಾಯತ್ರಿ, ಸದಸ್ಯರಾದ ಶಿವಕುಮಾರ್, ರೆಹಮಾನ್, ವಸಂತಾ, ಲಕ್ಷ್ಮೀಕೇಶವ ವಿದ್ಯಾಸಂಸ್ಥೆಯ ಮಾಲೀಕ ಸಿ.ಎನ್.ಕುಮಾರ್, ಸಿ.ಕೆ.ಮಹೇಂದ್ರ ಕುಮಾರ್, ಪದ್ಮನಾಭ, ನಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್, ಬಸವರಾಜ್ ಇದ್ದರು.