ಅಂಬೇಡ್ಕರ್ ಭವನ ಕಾಮಗಾರಿ ವೀಕ್ಷಣೆ

17-KGL-2
Published on

ಕೊಳ್ಳೇಗಾಲ: ಕೊಳ್ಳೇಗಾಲ ಭಾಗದ ದಲಿತರು ಭಾರತ ದೇಶದ ಮಿಲಿಟರಿಯಲ್ಲಿರುವ ಎಸ್-400 ಕ್ಷಿಪಣಿಯಂತಿದ್ದಾರೆ ಆದರೂ ಒಗ್ಗಟ್ಟಿನ ಕೊರತೆಯಿಂದ ಸುಸಜ್ಜಿತ ಡಾ.ಬಿ.ಆರ್.ಅಂಬೇಡ್ಕರ್ ಭವನ ಕಾಮಗಾರಿ ಲೋಕಾರ್ಪಣೆ ಗೊಂಡಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಲೋಕಾರ್ಪಣೆಗೊಳ್ಳದೆ ನನೆಗುದ್ದಿಗೆ ಬಿದ್ದಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ದಲಿತ ಮುಖಂಡರ ಉದ್ದೇಶಿಸಿ ಅವರು ಮಾತನಾಡಿದರು. ಕೊಳ್ಳೇಗಾಲದ ಅಂಬೇಡ್ಕರ್ ಭವನಕ್ಕಿರುವ ವಿಶಾಲವಾದ ಸ್ಥಳ ಇನ್ಯಾವುದೇ ಕಡೆಯಿಲ್ಲ. ಭವನ ಕಾಮಗಾರಿ ಆರಂಭಗೊಂಡು ಈಗಾಗಲೇ 20 ವರ್ಷವಾಗಿದೆ. ನಾನೂ ನೀವು ಕೇಳದಿದ್ದರೂ ನೀವು ಚೆನ್ನಾಗಿರಬೇಕೆಂದು ಭವನ ಪೂರ್ಣಗೊಳ್ಳಲು 3 ಕೋಟಿ ರೂ.ಅನುದಾನ ನೀಡಿದ್ದೇನೆ. ದಲಿತ ಸಮುದಾಯದವರು ಪ್ರಭಾವಿಗಳಾಗಿದ್ದೀರಿ. ಆದರೂ ಕಾಮಗಾರಿ ಪೂರ್ಣ ಗೊಳಿಸಿಕೊಂಡು ಜನರ ಉಪಯೋಗಕ್ಕೆ ಅರ್ಪಣೆ ಮಾಡಿಲ್ಲ ಎಂದರು.

ಭವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸುಸಜ್ಜಿತ ವಾಗಿದೆ ಆಗಾಗಿ ಯಾವುದಕ್ಕೂ ತಲೆ ಕಡೆಸಿಕೊಳ್ಳದೆ ಕೆಆರ್‌ಐಡಿಎಲ್ ಅಧಿಕಾರಿಗಳು ಬಾಕಿ ಕಾಮಗಾರಿ ಪೂರ್ಣ ಗೊಳಿಸಿ ಲೋಕಾರ್ಪಣೆಗೆ ನೀಡಬೇಕೆಂದು ಸೂಚನೆ ನೀಡಿದರು.

ಅಳಲು ತೋಡಿಕೊಂಡ ಎಇಇ:

ಸಚಿವರ ಎದುರು ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ ಅಳಲು ತೋಡಿಕೊಂಡರು. ಈಗಾಗಲೇ ಭವನ ವಿಚಾರವಾಗಿ ವ್ಯಕ್ತಿಯೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಇಲಾಖೆ ಹಾಗೂ ಹುದ್ದೆಯನ್ನು ತೋರಿಸದೆ ನನ್ನ ಹೆಸರನ್ನು ಬರೆದು ದೂರು ನೀಡುತ್ತಿದ್ದಾರೆ. ಇದು ನನಗೆ ಮಾನಸಿಕವಾಗಿ ಕಿರುಕುಳವಾಗುತ್ತಿದೆ. ಆದ್ದರಿಂದ ಭವನ ಉಳಿದ ಕಾಮಗಾರಿ ಪೂರ್ಣಗೊಳಿಸುತ್ತೇನೆ. ಹೊಸ ಕಾಮಗಾರಿ ನಾನು ಮಾಡುವುದಿಲ್ಲ ಎಂದರು. ಸಚಿವರು ಪ್ರತಿಕ್ರಿಯಿಸಿ, ಆಯ್ತು ನಿನ್ನ ಜವಾಬ್ದಾರಿಯಲ್ಲಿರುವ ಕಾಮಗಾರಿಯನ್ನು ಶಾಸಕರ ಸಲಹೆ ಪಡೆದು ಪೂರ್ಣ ಮಾಡುವಂತೆ ಸೂಚನೆ ನೀಡಿದರು. ಉಳಿದ ಕಾಮಗಾರಿಯನ್ನು ಪಿಡಬ್ಲ್ಯೂಡಿ ಅವರ ಬಳಿ ಮಾಡಿಸುತ್ತೇನೆ ಎಂದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕಟ್ಟಡವನ್ನು ಕೆಆರ್‌ಐಡಿಎಲ್ ಗುಣಮಟ್ಟದಿಂದ ನಿರ್ಮಿಸಿದೆ. ಕಳಪೆ ಎಂದು ಯಾರೋ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆದರೆ ಕಾಮಗಾರಿ ಚೆನ್ನಾಗಿದೆ ಎಂದು ರೀಪೋರ್ಟ್ ಹೇಳುತ್ತಿದೆ ಎಂದರು. ಈ ವೇಳೆ ಸಚಿವರು ಮಧ್ಯಪ್ರವೇಶಿಸಿ ಎಇಇ ಅವರಿಗೆ ಉತ್ತಮ ಕಾಮಗಾರಿ ಮಾಡಿದ್ದೀರಾ ಎಂದರೆ ಟೆನ್ಷನ್ ಏಕೆ ಎಂದರು. ಭೀಮನಗರದ ಯಜಮಾನ ಚಿಕ್ಕಮಾಳಿಗೆ ಮಾತನಾಡಿ, ನಾಗಣ್ಣ ಎಂಬುವರು ಚಿಕ್ಕಲಿಂಗಯ್ಯ ಅವರ ಮೇಲೆ ದೂರು ನೀಡಿ ತೊಂದರೆ ನೀಡುತ್ತಿದ್ದಾರೆ. ಕೆಟ್ಟ ಭಾಷೆಯಲ್ಲಿ ಅಧಿಕಾರಿ ಯೊಂದಿಗೆ ಮಾತನಾಡುತ್ತಾರೆ. ಅಧಿಕಾರಿಗಳಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಜಿ.ಎನ್ ನಂಜುಂಡಸ್ವಾಮಿಗೆ ಸಚಿವ ಟಾಂಗ್:

ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಕಾರ್ಯಕ್ರಮವೊಂದರಲ್ಲಿ ಎಚ್.ಸಿ ಮಹದೇವಪ್ಪ ಅವರು ಸಚಿವರಾಗಿ 2 ವರ್ಷವಾಗಿದೆ, ಅವರ ಪುತ್ರ ಸುನೀಲ್ ಬೋಸ್ ಸಂಸದರಾಗಿ ವರ್ಷವಾಗಿದೆ ಅಂಬೇಡ್ಕರ್ ಭವನಕ್ಕೆ ಇವರ ಕೊಡುಗೆ ಏನು ಎಂದಿದ್ದಾರೆ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಭವನ ಕಾಮಗಾರಿ ನಿಂತು ಏಳೆಂಟು ವರ್ಷವಾಗಿದೆ. ನಾನು ಸಚಿವನಾದ ನಂತರ ಅನುದಾನ ನೀಡಿದ್ದೇನೆ. ಸುನೀಲ್ ಬೋಸ್ ಸಂಸದರಾಗಿ 1 ವರ್ಷ ಆಗಿಲ್ಲ. ಒಂದು ವರ್ಷದ ಒಳಗೆಯೇ ಭವನಕ್ಕೆ ನಾನು 3 ಕೋಟಿ ರೂ.ನೀಡಿದ್ದೀನಿ. ಆತ 10 ವರ್ಷದ ಹಿಂದಿನಿಂದ ಏನನ್ನು ಅರೆಯಲು ಆಗದೆ ಈಗ ಮಾತನಾಡುತ್ತಾನೆ ಎಂದು ಮಾಜಿ ಶಾಸಕರಿಗೆ ಟಾಂಗ್ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್ ನಗರಸಭೆ ಸದಸ್ಯರು, ನಗರಸಭೆ ನಾಮ ನಿರ್ದೇಶಿತ ಸದಸ್ಯರು, ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಎಸ್. ಆನಂದ ಮೂರ್ತಿ, ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಪಾಪಣ್ಣ, ಸಹ ಕಾರ್ಯದರ್ಶಿ ಶಶಿಕುಮಾರ್, ಖಂಜಾಚಿ ರಾಜೇಶ್, ಭೀಮನಗರದ ಹಾಲಿ ಯಜಮಾನರು, ಮಾಜಿ ಯಜಮಾನರು, ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net