

ಅರಕಲಗೂಡು: ಪಟ್ಟಣದಲ್ಲಿ ನನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿ ಕಳಪೆಯಾಗಿರುವ ಕುರಿತು ತನಿಖೆ ನಡೆಸಿ ಕಾಮಗಾರಿ ಪುನರಾರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಶಾಸಕ ಎ.ಟಿ. ರಾಮಸ್ವಾಮಿ, ಪಪಂ ಅಧ್ಯಕ್ಷೆ ಶಾರಧಾ ಪೃಥ್ವಿರಾಜ್ ಹಾಗೂ ದಲಿತ ಸಮುದಾಯ ಮುಖಂಡರೊಂದಿಗೆ ಭವನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಅಂಬೇಡ್ಕರ್ ಭವನ ಕಳಪೆಯಾಗಿ ಕಾಮಗಾರಿ ಅರ್ಧಕ್ಕೆ ನಿಂತಿರುವ ಕುರಿತು ಶಾಸಕರು ಕಳೆದ ವರ್ಷ ವಿಧಾನಸಭೆ ಅಧಿವೇಶನದಲ್ಲೇ ಪ್ರಸ್ತಾಪಿಸಿದ್ದರು. ನಾನು ಬರುವುದು ವಿಳಂಬವಾಗಿದೆ. ಕಾಮಗಾರಿ ಎಲ್ಲೆಲ್ಲಿ ಕಳಪೆಯಾಗಿದೆ ಎನ್ನುವುದನ್ನು ಮತ್ತೊಂದು ಸಂಸ್ಥೆ ಮೂಲಕ ತನಿಖೆ ನಡೆಸುವುದಾಗಿ ತಿಳಿಸಿದರು.
ಅಂಬೇಡ್ಕರ್ ಭವನದ ಕಾಮಗಾರಿಗೆ ಸರ್ಕಾರ ಮಂಜೂರು ಮಾಡಿರುವ ಅನುದಾನ, ಆಗಿರುವ ಕಾಮಗಾರಿಯ ವಿವರವನ್ನು ಜಿಪಂ ಸಹಾಯಕ ಇಂಜಿನಿಯರ್ ರಾಜೇಂದ್ರ ಅವರಿಂದ ಪಡೆದರು.
ಜಿಪಂ ಮಾಜಿ ಸದಸ್ಯ ಬರಗೂರು, ರವಿ, ಮುಖಂಡ ವಿಷ್ಣುಪ್ರಕಾಶ್ ಅವರು ಭವನದ ಕಾಮಗಾರಿ ಕಳಪೆಯಾಗಿರುವ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಪಿಲ್ಲರ್ ಗಳು ಕಳಪೆಯಾಗಿ ಭವನದ ಕಾಮಗಾರಿ ಕಳಪೆಚಿಾಗಿದೆ. ಭವನ ಇಲ್ಲದೆ ಸಮುದಾಯದ ಜನರು ಮದುವೆ ಶುಭ ಕಾರ್ಯ ನಡೆಸಲು ತೊಂದರೆಯಾಗಿದೆ. ಭವನವನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಕಳಪೆ ಕಾಮಗಾರಿ ನಡೆಸಿದ ಭೂ ಸೇನಾ ನಿಗಮದ ವಿರುದ್ದ ಕ್ರಮ ಜರುಗಿಸಬೇಕು ಎಂದು ಸಚಿವರಲ್ಲಿ ಆಗ್ರಹಿಸಿದರು.
ಯೋಗಾರಮೇಶ್ ಆಕ್ರೋಶ: ಕಳೆದ ವಿಧಾನಸಭಾ ಚುನಾವಣೆ ವೇಳೆ ಹಳೆಯ ಭವನವನ್ನು ತೆರವುಗೊಳಿಸಿದ ಮಾಜಿ ಸಚಿವ ಎ. ಮಂಜು ಅವರು ಇನ್ನಾರು ತಿಂಗಳಲ್ಲಿ ಹೊಸ ಭವನ ಸ್ಥಾಪಿಸಿ ದಲಿತ ಕೇರಿಗಳಿಗೆ ಮತ ಕೇಳಲು ಬರುವುದಾಗಿ ಹಸಿ ಸುಳ್ಳು ಹೇಳಿದ್ದರು. ಅವರ ಸರ್ಕಾರ ಇದ್ದಾಗಲೇ ಭವನದ ಕಾಮಗಾರಿ ಪೂರ್ಣಗೊಳಿಸಲಿಲ್ಲ. ಶಾಸಕ ಎ.ಟಿ. ರಾಮಸ್ವಾಮಿ ಅವರು ಅವರದೇ ಪಕ್ಷದ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಭವನದ ಕಾಮಗಾರಿ ಮುಗಿಸಲು ಪ್ರಯತ್ನಿಸಲಿಲ್ಲ. ಕಳೆದ ನಾಲ್ಕುವರೆ ವರ್ಷಗಳಿಂದ ಭವನದ ಕಾಮಗಾರಿ ಕೈಗೆತ್ತಿಕೊಳ್ಳುವ ಬಗ್ಗೆ ತಲೆಕೆಡಿಸಿಕೊಳ್ಳದೆ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಹಾಲಿ ಮತ್ತು ಮಾಜಿ ಸಚಿವರ ಕಾರ್ಯವೈಖರಿ ವಿರುದ್ದ ಎಚ್. ಯೋಗಾರಮೇಶ್ ಅವರು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮುಂದೆ ಕಿಡಿಕಾರಿದರು.
ಜೋಡೋ ಪಾದಯಾತ್ರೆ ಪರಿಣಾಮ ಬೀರಲ್ಲ :
ದೇಶವನ್ನು ಒಗ್ಗೂಡಿಸುವ ಹೆಸರಿನಲ್ಲಿ ಕಾಂಗ್ರೆಸ್ಸಿನವರು ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆ ಬಿಜೆಪಿ ವಿರುದ್ದ ಯಾವುದೇ ಪರಿಣಾಮ ಬೀರಲಾರದು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿಷ್ಠೆ ಹೆಚ್ಚಿಸಿದ್ದಾರೆ. ಕಾಶ್ಮೀರವನ್ನು ಒಂದುಗೂಡಿಸಿದ್ದಾರೆ. ಇದೇ ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದ ಸ್ಥಿತಿ ಏನಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು.