ಅಂಬೇಡ್ಕರ್, ಬಸವಣ್ಣ ಆದರ್ಶದಲ್ಲಿ ಸಾಗೋಣ

28rajesh3
Published on

ಚಾಮರಾಜನಗರ: ರಾಜ್ಯದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವೇಶ್ವರರ ಆದರ್ಶದಲ್ಲಿ ಸಾಗೋಣ ಎಂದು ಎಸ್ಸಿ, ಎಸ್ಟಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶಯ್ಯ ಸಲಹೆ ನೀಡಿದರು.

ನಗರದ ಪರಿವರ್ತನ ಅಧ್ಯಯನ ಕೇಂದ್ರದಲ್ಲಿ ರಾಜ್ಯ ಎಸ್ಸಿ, ಎಸ್ಟಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಶ್ರೀಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಶೇ.44 ರಷ್ಟು ಎಸ್ಸಿ, ಎಸ್ಟಿ ಶಿಕ್ಷಕರು ಸೇವೆಸಲ್ಲಿಸುತ್ತಿದ್ದು, ನಮ್ಮಲ್ಲಿನ ಒಗ್ಗಟ್ಟಿನ ಕೊರತೆಯಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವಚನ ಸಾಹಿತ್ಯದ ಪಿತಾಮಹಾ ಶ್ರೀಬಸವಣ್ಣ ಅವರ ತತ್ವ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಒಗ್ಗಟ್ಟಿನಿಂದ ಸಾಗಬೇಕಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳ 4 ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಕೂಲಿ ಕಾರ್ಮಿಕರು, ದಲಿತರು ಹಾಗೂ ಹಿಂದುಳಿದವರ ಮಕ್ಕಳು ಶಾಲೆಯಿಂದ ದೂರವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಚಿಂತನೆ ಮಾಡಬೇಕಿದೆ. ನಮ್ಮ ಒಗ್ಗಟ್ಟು ಇಲ್ಲದೇ ಇರುವುದೇ ಇದಕ್ಕೆ ಕಾರಣವಾಗಿದೆ. ಶೇ.70 ರಷ್ಟು ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳೇ ಉನ್ನತ ಉದ್ಯೋಗಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ನಿವೃತ್ತಿಯ ನಂತರ ಶಿಕ್ಷಕರ ಜೀವನ ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಸಂಘಟಿತರಾಗಬೇಕಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವಣ್ಣನವರ ಸಮಾನತೆಯ ಆಶಯದೊಂದಿಗೆ ಸಂಘವನ್ನು ಮುನ್ನಡೆಸಲಾಗುತ್ತಿದೆ. ಅವರ ಆಶಯಗಳನ್ನು ಶಿಕ್ಷಕರು ಅಳವಡಿಸಿಕೊಂಡು ಸಾಗಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್ಸಿ, ಎಸ್ಟಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ದುಂಡುಮಾದಯ್ಯ, ಜಿಲ್ಲಾಧ್ಯಕ್ಷ ಕೆಂಪರಾಜು, ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಘುಕುಮಾರ್, ತಾಲೂಕು ಅಧ್ಯಕ್ಷ ಆನಂದ್ ಕುಮಾರ್, ಸದಸ್ಯರಾದ ಶಿವರಾಜು, ರಾಜು, ಮಹಾದೇವಸ್ವಾಮಿ ಚಂದಕವಾಡಿ, ಗುರುಸಿದ್ದಯ್ಯ, ಮಹೇಶ್ ರಾಮಸಮುದ್ರ, ಭವಾನಿದೇವಿ, ಬಿಆರ್‌ಪಿ ಮಹಾದೇವಸ್ವಾಮಿ, ಸಿದ್ದರಾಜು, ಮಂಡ್ಯ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ವೈ.ಎಸ್.ಮಹದೇವಯ್ಯ, ಸಾವಿತ್ರಿ ಭಾಪುಲೆ ಸಂಘದ ನೇತ್ರಾವತಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜೋಸೆಫ್, ಚಿಕ್ಕಬಸವಯ್ಯ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net