

ಮೈಸೂರು: ರಾಜ್ಯದ ಎಲ್ಲ ಅಂಬೇಡ್ಕರ್ ಪ್ರತಿಮೆಗಳು ಮತ್ತು ನಾಮಫಲಕಗಳ ರಕ್ಷಣೆಗಾಗಿ ಸರ್ಕಾರದಿಂದ ಸಿಸಿ ಕ್ಯಾಮರಾ ಅಳವಡಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ವಾಜಮಂಗಲ ಗ್ರಾಮದಲ್ಲಿ ಡಾ.ಅಂಬೇಡ್ಕರ್ ನಾಮಫಲಕ, ಫ್ಲೆಕ್ಸ್‌ಗಳನ್ನು ಹರಿದು ಅವಮಾನ ಮಾಡಿರುವುದನ್ನು ಖಂಡಿಸಿ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಸಭೆಯಲ್ಲಿ ಈ ಒತ್ತಾಯ ಮಾಡಲಾಗಿದೆ.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್ ಮಾತನಾಡಿ, ಈ ಘಟನೆಯಲ್ಲಿ ಪೊಲೀಸರ ವೈಫಲ್ಯವಿದೆ. ಮೈಸೂರು ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ನಾಮಫಲಕಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿದ್ದರೆ,
ಈ ಪ್ರಕರಣ ಮರುಕಳಿಸುತ್ತಿರಲಿಲ್ಲ. ಮುಖ್ಯಮಂತ್ರಿ ತವರು ಜಿಲ್ಲೆ ಮತ್ತು ಸ್ವಕ್ಷೇತ್ರದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡುವ ಮೂಲಕ ಸಿದ್ದರಾಮಯ್ಯ ಅವರಿಗೆ ಕೆಟ್ಟ ಹೆಸರು ತರಲು ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
2 ಬೈಕಿನಲ್ಲಿ ಮೂವರು ಬಂದು ಈ ಕೃತ್ಯ ಎಸಗಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಎರಡು ದಿನಗಳ ಒಳಗಾಗಿ ಪೊಲೀಸರು ಕಿಡಿಗೇಡಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆಯ ಮೂಲಕ ಬಾಬಾ ಸಾಹೇಬರ ಅನುಯಾಯಿಗಳ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಿವೈಎಸ್‌ಪಿ ಕರೀಂ, ಇನ್‌ಸ್ಪೆಕ್ಟರ್ ಶಿವರಾಜ್ ಶೆಟ್ಟಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಅಪರ ಸರ್ಕಾರಿ ವಕೀಲ ತಿಮ್ಮಯ್ಯ, ವಕೀಲರಾದ ಪುಟ್ಟರಸ, ಎ.ಆರ್.ಕಾಂತರಾಜ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮ್, ಕುರುಬ ಸಂಘದ ಮುಖಂಡ ಸುಬ್ರಮಣ್ಯ ಸೇರಿದಂತೆ ಗ್ರಾಮದ ಯಜಮಾನರು ಮುಖಂಡರು ಇದ್ದರು.