ಅಂಬೇಡ್ಕರ್ ಪ್ರತಿಮೆ, ಸಂವಿಧಾನಕ್ಕೆ ಅವಮಾನಕ್ಕೆ ಕಿಡಿ

16HBD01
ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಅವಮಾನ ಹಾಗೂ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಹುಮನಾಬಾದ್‌ನಲ್ಲಿ ಸೋಮವಾರ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಮನವಿಪತ್ರ ಸಲ್ಲಿಸಲಾಯಿತು. ಅನೀಲ ದೊಡ್ಡಿ, ಗೌತಮ ಪ್ರಸಾದ, ಗಣಪತಿ ಅಷ್ಟೂರೆ, ಶಿವಾನಂದ ಕಟ್ಟಿಮನಿ ಇತರರಿದ್ದರು.
Published on

ಹುಮನಾಬಾದ್: ಬೀದರ್ ಜಿಲ್ಲೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮತ್ತು ಸಂವಿಧಾನಕ್ಕೆ ಅವಮಾನ ಹಾಗೂ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ ಮಾನವ ಸರಪಳಿ ನಿರ್ಮಿಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಒಕ್ಕೂಟದ ಪ್ರಮುಖರು, ಕಳೆದ ೧೨ರಂದು ಮಧ್ಯರಾತ್ರಿ ಬೀದರ್ ತಾಲೂಕಿನ ವಿಳಾಸಪುರದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಅವಮಾನಿಸಿದ್ದರೂ ಇದುವರೆಗೆ ಬಂಧಿಸಿಲ್ಲ. ಮಹಾರಾಷ್ಟ್ರದ ಪರಭಣಿಯಲ್ಲಿ ಸಂವಿಧಾನ ಪೀಠಿಕೆ ಧ್ವಂಸಗೊಳಿಸಿದವರ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸ್ವಕ್ಷೇತ್ರದ ಮಳಚಾಪುರ, ತಳವಾಡ(ಕೆ), ರಾಚಪ್ಪ ಗಡಿಗೌಡಗಾಂವ, ಚಳಕಾಪುರ ಗ್ರಾಮಗಳಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದು ಅಟ್ರಾಸಿಟಿ ಕೇಸ್ ದಾಖಲಾಗಿವೆ. ವಿಷಯವನ್ನು ಗಂಭೀರ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಈಶ್ವರ ಖಂಡ್ರೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಅನೀಲ ದೊಡ್ಡಿ, ಗೌತಮ ಪ್ರಸಾದ, ಗಣಪತಿ ಅಷ್ಟೂರೆ, ಶಿವಾನಂದ ಕಟ್ಟಿಮನಿ, ಸೋಮು ಡಾಂಗೆ, ಮುಕೇಶ ಪಾಂಡೆ, ಶಿವಕುಮಾರ ಜಿವಾ, ಉಮೇಶ ದಾಡಗೆ, ಶಶಿ ಡಾಂಗೆ ಇತರರಿದ್ದರು. ಸಿಎಂ, ಗೃಹ ಸಚಿವ ಮತ್ತು ಪ್ರತಿಪಕ್ಷ ನಾಯಕರಿಗೆ ಬರೆದ ಮನವಿಪತ್ರವನ್ನು ಕಂದಾಯ ಅಧಿಕಾರಿಗೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net