

ಮೂಡಿಗೆರೆ: ಭೀಮ ಕೋರೆಗಾಂವ್ ವಿಜಯೋತ್ಸವ ಆಚರಣಾ ಸಮಿತಿಯಿಂದ ಜ.3ರಂದು ನಡೆಸಿದ ಕಾರ್ಯಕ್ರಮದ ವೇಳೆ ಲಯನ್ಸ್ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಅಂಬೇಡ್ಕರ್ ಪುತ್ಥಳಿಯನ್ನು ಏಕಾಏಕಿ ತೆರವು ಮಾಡಿರುವುದನ್ನು ಖಂಡಿಸಿ ಬಿಎಸ್ಪಿಯಿಂದ ಬುಧವಾರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಆಡಳಿತ ತಕ್ಷಣ ಜಾಗ ಗುರುತಿಸಿ ಪುತ್ಥಳಿ ನಿರ್ಮಾಣ ಮಾಡಬೇಕು ಎಂಬ ಮನವಿಯನ್ನು ಉಪತಹಸೀಲ್ದಾರ್ ಸಿ.ಎಲ್.ಸುರೇಂದ್ರ ಬಾಬು ಅವರಿಗೆ ನೀಡಿದರು.
ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ಮಾತನಾಡಿ, ಅಂಬೇಡ್ಕರ್ ರಾಷ್ಟ್ರದ ಸರ್ವ ಶ್ರೇಷ್ಠ ನಾಯಕ ಎಂಬುದನ್ನು ಮರೆಯಬಾರದು. ಕಳೆದ ವಾರ ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ್ದ ಪುತ್ಥಳಿಯನ್ನು ತೆರವುಗೊಳಿಸಿದ ಘಟನೆಯಿಂದ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಂತಾಗಿದೆ. ಕಾರ್ಯಕ್ರಮ ನಡೆದ ಸ್ಥಳದಲ್ಲಿ ಯಾರಿಗೂ ತಿಳಿಸದೆ ಪುತ್ಥಳಿ ಪ್ರತಿಷ್ಠಾಪನೆ ಮಾಡಿದ್ದು ಸರಿಯಲ್ಲ. ಪ್ರತಿಷ್ಠಾಪನೆ ಮಾಡಿದ ಬಳಿಕ ಏಕಾಏಕಿ ತೆರವುಗೊಳಿಸಿದ್ದು ಸರಿಯಲ್ಲ ಎಂದರು.
ಬಿಎಸ್ಪಿ ಜಿಲ್ಲಾ ಸಂಯೋಜಕ ಯು.ಬಿ.ಮಂಜಯ್ಯ ಮಾತನಾಡಿ, ಅಂಬೇಡ್ಕರ್ ಪುತ್ಥಳಿ ತೆರವುಗೊಳಿಸಿ ತಾಲೂಕು ಆಡಳಿತ ಮಾಡಿದ ಅವಮಾನ ನಾಗರಿಕ ಸಮಾಜಕ್ಕೆ ಮಾಡಿದ ಅವಮಾನವಾಗಿದೆ. ಪ್ರತಿಷ್ಠಾಪಿಸಿದ್ದ ಪುತ್ಥಳಿಯನ್ನು ಯಾರದೋ ಒತ್ತಡಕ್ಕೆ ಮಣಿದು ತೆರವುಗೊಳಿಸಿದ್ದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಬಿಎಸ್ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಲೋಕವಳ್ಳಿ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಹಾಂದಿ ಬಾಬಣ್ಣ, ಶ್ರೀಕಾಂತ್, ಹೊನ್ನೇಶ್, ಬಕ್ಕಿ ರವಿ, ಸುರೇಶ್, ಕುಮಾರ್, ನಾಗೇಶ್, ಅಭಿಜಿತ್, ಸಂದೀಪ್, ರತೀಶ್, ಸತೀಶ್, ಮಂಜು ಇತರರಿದ್ದರು.