ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸ್ವಾಭಿಮಾನದ ಸಂಕೇತ

6blrp1
ಬೇಲೂರು ತಾಲೂಕಿನ ತೊಳಲು ಹೊಸಪೇಟೆ ಸರ್ಕಲ್‌ನಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು. ಕೆ.ಎಸ್.ಲಿಂಗೇಶ್, ಎಂ.ಆರ್.ವೆಂಕಟೇಶ್, ಎಂ.ಎ.ನಾಗರಾಜ್ ಇತರರು ಇದ್ದರು.
Published on

ಬೇಲೂರು: ಎಲ್ಲ ಸಮಾಜಕ್ಕೂ ಅನುಕೂಲ ಮಾಡಿಕೊಡುವ ಸಂವಿಧಾನ ಬರೆದಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ತಾಲೂಕಿನ ತೊಳಲು ಹೊಸಪೇಟೆ ಸರ್ಕಲ್‌ನಲ್ಲಿ ನಿರ್ಮಿಸುತ್ತಿರುವುದು ಸ್ವಾಭಿಮಾನದ ಸಂಕೇತವಾಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ತಾಲೂಕಿನ ತೊಳಲು ಹೊಸಪೇಟೆ ಸರ್ಕಲ್‌ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಆಶಯದಂತೆ ದೇಶದ ಜನರು ನಡೆದರೆ ಮುಂದೆಯೂ ದೇಶ ಒಗ್ಗಟ್ಟಾಗಿ ಒಕ್ಕೂಟ ವ್ಯವಸ್ಥೆ ಉಳಿದು ಶಾಂತಿಯುತ ಬದುಕು ರೂಪಿಸಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಚುನಾವಣೆ ಸಂದರ್ಭ ಒಂದು ಪಕ್ಷದವರು ಆ ಧರ್ಮ, ಈ ಧರ್ಮ ಎಂದು ರಾಜಕೀಯ ಉದ್ದೇಶಕ್ಕಾಗಿ ದೇಶವನ್ನು ಒಡೆಯುವ ಕೆಲಸ ಮಾಡಿದರೆ, ಅವರನ್ನೂ ಭಯೋತ್ಪಾದಕರು ಎನ್ನಬೇಕಾಗುತ್ತದೆ. ಇಲ್ಲಿ ಎಲ್ಲ ಧರ್ಮಗಳು ಶ್ರೇಷ್ಠ. ಯಾವುದು ಕೀಳು ಅಲ್ಲ, ಮೇಲೂ ಅಲ್ಲ. ಜಾತಿ, ಧರ್ಮಗಳನ್ನು ಅವರವರ ಮನೆಗಳಲ್ಲಿ ಆಚರಿಸಲಿ ಎಂದು ಸಲಹೆ ನೀಡಿದರು.

ತೊಳಲು ಹೊಸಪೇಟೆಯಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ಎಲ್ಲರೂ ಕೈಜೋಡಿಸಿ ಕೆಲಸ ಮಾಡೋಣ. ತಾಲೂಕು ಕಚೇರಿ ಮುಂದೆ 10 ಅಡಿ ಪ್ರತಿಮೆಯನ್ನು ದಿನಾಂಕ ನಿಗದಿ ಪಡಿಸಿ ಅದ್ದೂರಿ ಕಾರ್ಯಕ್ರಮದ ಮೂಲಕ ಅನಾವರಣ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ ದಾನಿಗಳು ಸಾಕಷ್ಟಿದ್ದಾರೆ. ಚುನಾವಣೆ ಸಂದರ್ಭ ಅವರ ಸೇವೆ ಪಡೆಯುವ ಪ್ರಯತ್ನ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಂ.ಎ.ನಾಗರಾಜ್ ಮಾತನಾಡಿ, ಪ್ರತಿಮೆ ನಿರ್ಮಾಣಕ್ಕೆ ಸಂಘಟನೆ ಮುಖ್ಯ. ಒಗ್ಗಟ್ಟಿನಿಂದ ಕಾರ್ಯಕ್ರಮದ ರೂಪುರೇಷಗಳನ್ನು ಮಾಡಿ ಶಾಶ್ವತವಾಗಿ ಉಳಿಯುವಂತೆ ಪ್ರತಿಮೆ ನಿರ್ಮಿಸಬೇಕು ಎಂದು ತಿಳಿಸಿದರು.

ಎಂ.ಎಸ್.ನಾಗೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ತೊಳಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರೇಗೌಡ, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಗಂಗಾಧರ್ ಬಹುಜನ್, ಜಿಪಂ ಮಾಜಿ ಸದಸ್ಯರಾದ ಅಮಿತ್‌ಶೆಟ್ಟಿ, ಇಂದಿರಾ, ತಾಪಂ ಮಾಜಿ ಸದಸ್ಯರಾದ ಮಂಜುನಾಥ್, ಶಶಿಕುಮಾರ್, ಜೆಡಿಎಸ್ ಮುಖಂಡ ವೆಂಕಟೇಶ್, ಅಂಬೇಡ್ಕರ್ ಯುವಕ ಸಂಘದ ಗಂಗರಾಜು, ಶರತ್, ಲತಾ ವಸಂತಕುಮಾರ್, ರಘು, ಹೊನ್ನಯ್ಯ, ಅಣ್ಣಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net