ಅಂಬೇಡ್ಕರ್ ಪ್ರತಿಮೆ ಎದುರು ಪ್ರೇಮಿಗಳ ವಿವಾಹ

kdr marri
ಕಡೂರಿನ ಅಂಬೇಡ್ಕರ್ ಪ್ರತಿಮೆ ಬಳಿ ವೈ.ಎಸ್.ಕುಮಾರ್ ಮತ್ತು ಸುಚಿತ್ರಾ ವಿವಾಹವಾದರು. ದಂಪತಿಗೆ ಮಾದಿಗ ಸಮಾಜದ ಮುಖಂಡರು ಆಶೀರ್ವದಿಸಿದರು. ಜಗದೀಶ್, ದೊಡ್ಡಘಟ್ಟ ಗಂಗರಾಜ್, ಬಾಣೂರು ಸುರೇಶ್, ನಾರಾಯಣಮೂರ್ತಿ, ತಿಮ್ಮಯ್ಯ, ಗೋಪಿ ಇತರರಿದ್ದರು.
Published on

ಕಡೂರು: ಮಾಲಾರ್ಪಣೆ, ಜಯಂತಿಗಳ ಆಚರಣೆ, ಪ್ರತಿಭಟನೆ, ಬೇಡಿಕೆಗಳ ಮನವಿ ಸಲ್ಲಿಕೆಗಳಿಗೆ ಸೀಮಿತವಾಗಿದ್ದ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಯುವಪ್ರೇಮಿಗಳಿಗೆ ಕಂಕಣ ಕೂಡಿಸುವ ವೇದಿಕೆಯಾಗಿ ಸಾಕ್ಷೀಕರಿಸಿತು.

ಪಟ್ಟಣದ ಅಂಬೇಡ್ಕರ್ ವೃತ್ತದ ಡಾ. ಬಿ.ಅರ್.ಅಂಬೇಡ್ಕರ್ ಪ್ರತಿಮೆ ಬಳಿ ತಾಲೂಕಿನ ಯಗಟಿ ಗ್ರಾಮದ ವೈ.ಎಸ್.ಕುಮಾರ ಮತ್ತು ಅರಸೀಕೆರೆ ತಾಲೂಕಿನ ಪುರಲೇಹಳ್ಳಿ ಯುವತಿ ಪಿ.ಎಸ್.ಸುಚಿತ್ರಾ ಪ್ರೇಮಿಗಳ ದಿನಾಚರಣೆ ಶುಕ್ರವಾರ ಮಾಂಗಲ್ಯಧಾರಣೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಅಂಬೇಡ್ಕರ್ ಪ್ರತಿಮೆ ಆವರಣದ ಸುತ್ತಲೂ ಬಾಳೆಕಂದುಕಟ್ಟಿ ಅಲಂಕರಿಸಿ ಮದುವೆಗೆ ಸಿದ್ಧಗೊಳಿಸಲಾಗಿತ್ತು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರೂ ಸಮಕಾಲೀನ ಅದ್ದೂರಿ ಮದುವೆಗಳಿಗೆ ಪ್ರಾಮುಖ್ಯತೆ ನೀಡದೆ ಸರಳವಾಗಿ ಎಲ್ಲರ ಸಮ್ಮುಖದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅಂಬೇಡ್ಕರ್ ಮತ್ತು ಬುದ್ಧನ ಶಾಂತಿ ಸಂದೇಶಗಳನ್ನು ಪಠಿಸುತ್ತ ಸಂವಿಧಾನ ಶಿಲ್ಪಿಗೆ ಜಯಘೋಷಗಳೊಂದಿಗೆ ಮದುವೆಯಾದರು. ಮಾದಿಗ ಸಮಾಜದ ಮುಖಂಡರು ಹಾಗೂ ಸ್ನೇಹಿತರ ಬಳಗದವರು ದಂಪತಿಗೆ ಶುಭ ಹಾರೈಸಿದರು.

ನಮ್ಮ ಮದುವೆಗೆ ಎರಡೂ ಮನೆಯ ಕಡೆಯಿಂದಲೂ ಯಾವುದೇ ವಿರೋಧವಿಲ್ಲ. ಇಬ್ಬರೂ ಒಪ್ಪಿಗೆ ಪಡೆದು ಪ್ರೇಮಿಗಳ ದಿನಾಚರಣೆಯಂದು ಅದರಲ್ಲೂ ವಿಶೇಷವಾಗಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಪ್ರತಿಮೆ ಬಳಿ ಮದುವೆಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದೆವು. ನಮ್ಮ ಆಸೆ ನೆರವೇರಿಸಿಕೊಳ್ಳಲಾಗಿದೆ. ಅದ್ದೂರಿ ಮದುವೆ ಜನರ ಬಡತನ ಹೆಚ್ಚಿಸುತ್ತದೆ. ಸರಳತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ವರ ವೈ.ಎಸ್.ಕುಮಾರ ವಿಜಯವಾಣಿಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾದಿಗ ಸಮಾಜದ ಜಗದೀಶ್, ಗ್ರಾಪಂ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ಡಿಎಸ್‌ಎಸ್ ಮುಖಂಡರಾದ ದೊಡ್ಡಘಟ್ಟ ಗಂಗರಾಜ್, ಬಾಣೂರು ಸುರೇಶ್, ನಾರಾಯಣಮೂರ್ತಿ, ಜಗದೀಶ್, ತಿಮ್ಮಯ್ಯ, ಗೋಪಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net