

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅನುಯಾಯಿಗಳು ಹೆಚ್ಚು ಅಧ್ಯಯನಶೀಲರಾಗಿ ಅವರ ತತ್ವ ಆದರ್ಶಗಳನ್ನು ಅನುಸರಿಸಿ ಎಂದು ನಂಜನಗೂಡು ಶಾಸಕ ಧ್ರುವ ನಾರಾಯಣ್ ತಿಳಿಸಿದರು.
ತಾಲೂಕಿನ ಮಂಗಲ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಅನಾವರಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿ, ಮೀಸಲಾತಿಯನ್ನು ಕಲ್ಪಿಸಿಕೊಡದಿದ್ದರೆ ನಾವು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಅವರು ನೀಡಿದ ಸಂವಿಧಾನದಡಿಯಲ್ಲಿ ನಾನು ಶಾಸಕನಾಗಿದ್ದೇನೆ. ಹೀಗಾಗಿ ಅವರ ಜಯಂತಿಯನ್ನು ಆಚರಣೆ ಮಾಡುವ ಜತೆಗೆ ಅವರ ತತ್ವ-ಆದರ್ಶಗಳನ್ನು ಪಾಲನೆ ಮಾಡಬೇಕಾಗಿದೆ ಎಂದು ಹೇಳಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವಜ್ಞಾನಿಯಾಗಿದ್ದು, ಸಂವಿಧಾನ ರಚನೆ ಮಾಡುವ ಮೂಲಕ ಎಲ್ಲಾ ವರ್ಗದವರಿಗೂ ಮೀಸಲಾತಿಯನ್ನು ಕಲ್ಪಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದ್ದಾರೆ. ಅವರು ಕೇವಲ ಎಸ್ಸಿ, ಎಸ್ಟಿಗಳಿಗೆ ಮಾತ್ರ ಮೀಸಲಾತಿ ನೀಡಿಲ್ಲ. ಎಲ್ಲಾ ವರ್ಗಗಳು ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿವೆ. ಅವರ ಆಶಯವು ಸಹ ಎಲ್ಲರು ಸಮಾನರು, ನಾವೆಲ್ಲರು ಭಾರತೀಯರು ಎಂಬುದನ್ನು ಸಾರಿ ಹೇಳುತ್ತದೆ ಎಂದರು.
ಮೂಡಿಗೆರೆ ತಹಶೀಲ್ದಾರ್ ರಾಜಶೇಖರಮೂರ್ತಿ ಮಾತನಾಡಿ, ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವ ಸಲುವಾಗಿ ಮೀಸಲಾತಿ ಕಲ್ಪಿಸಿಕೊಟ್ಟರು. ಆದರೆ, ಇಂದು ಜಾತಿ ವ್ಯವಸ್ಥೆ ಭದ್ರವಾಗುತ್ತಿದೆ. ಜಾತಿ ಹೆಸರಿನಲ್ಲಿ ಸಂಘಟನೆಗಳು ಜಾಸ್ತಿಯಾಗಿವೆ. ಈ ನಿಟ್ಟಿನಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿ, ಜಾತಿ ರಹಿತ ಭಾರತವನ್ನು ನಿರ್ಮಾಣ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಟಿ. ನರಸೀಪುರದ ನಳಂದ ಬುದ್ದ ವಿಹಾರದ ಬಂತೆ ಭೋದಿ ರತ್ನ,ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ರಾ.ಪಂ. ಅಧ್ಯಕ್ಷ ಅಣ್ಣಪ್ಪಸ್ವಾಮಿ, ಸದಸ್ಯ ಶೋಭಾ, ಸುಮಕುಮಾರಸ್ವಾಮಿ ಹಾಗೂ ಇತರರು ಹಾಜರಿದ್ದರು.