

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಸಾಧನೆಯೇ ಒಂದು ದೊಡ್ಡ ಮೈಲಿಗಲ್ಲು ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಎಸ್.ಎಲ್.ಚನ್ನಬಸವಣ್ಣ ಹೇಳಿದರು.
ಕರ್ನಾಟಕ ಬುದ್ಧ ದಮ್ಮ ಸಮಿತಿ ವತಿಯಿಂದ ವಿಜಯನಗರ 1ನೇ ಹಂತದ ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ ಮತ್ತು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರು ದೇಶದ ಬಹುಜನರು, ತಳ ಸಮುದಾಯವನ್ನು ಶಿಕ್ಷಣದ ಮೂಲಕವೇ ಮೇಲೆತ್ತುವ ಕೆಲಸ ಮಾಡಿದರು. ಇಂತಹ ಕೆಲಸ ಯಾವ ದೇಶದಲ್ಲೂ ಆಗಿಲ್ಲ. ಬೇರೆ ದೇಶಗಳಲ್ಲಿ ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹಿಂಸಾತ್ಮಕ ಕೃತ್ಯ ಅನುಸರಿಸಿದ್ದರಿಂದ ರಕ್ತ ಕ್ರಾಂತಿಗಳೇ ನಡೆದಿವೆ. ಹಿಂಸೆಯ ಮೂಲಕವೇ ಹಕ್ಕುಗಳನ್ನು ಪಡೆಯುವ ಕೆಲಸವಾಗಿದೆ.
ಆದರೆ, ಭಾರತದಲ್ಲಿ ಬಾಬಾ ಸಾಹೇಬರು ಇದಕ್ಕೆ ಅವಕಾಶ ನೀಡದೆ ಶಾಂತಿಯುತ ಹೋರಾಟದ ಮೂಲಕವೇ ಜನರಿಗೆ ಸಮಾನತೆ ತಂದುಕೊಡುವ ಕೆಲಸ ಮಾಡಿದರು ಎಂದು ಸ್ಮರಿಸಿದರು.
ಯಾವುದೇ ಭಾಷೆ, ಧರ್ಮ, ಸಂಸ್ಕೃತಿಯನ್ನು ಪಾಲನೆ ಮಾಡಲು ಸಂವಿಧಾನವೇ ಮೂಲ ಕಾರಣ. ಆದ್ದರಿಂದ ಈ ದೇಶದ ನಿಜವಾದ ಧರ್ಮ ಗ್ರಂಥ ಸಂವಿಧಾನವಾಗಿದೆ. ಇಂದಿನ ಪೀಳಿಗೆಗೆ ಬಾಬಾ ಸಾಹೇಬರನ್ನು ಪರಿಚಯಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಮಹದೇವಪ್ಪ ಮಾತನಾಡಿ, ಅನೇಕ ಸಂಸ್ಕೃತಿ, ಧಾರ್ಮಿಕ ಕೇಂದ್ರಗಳ ಭಕ್ತಿ ಭಾವದ ಸೆಲೆಯಾಗಿ ಹರಿಯುವ ಗಂಗಾ ನದಿಯಂತೆ ಬಾಬಾಸಾಹೇಬರು ಈ ದೇಶದ ಕೋಟ್ಯಂತರ ಶೋಷಿತ ಜನರ ಧ್ವನಿಯಾಗಿ, ಅವರ ಬದುಕಿನ ದಾರಿದೀಪವಾಗಿದ್ದಾರೆ ಎಂದು ತಿಳಿಸಿದರು.
ಪ್ರೊ.ಸಿದ್ದಣ್ಣ ಲಂಗೋಟಿ, ಸಮಿತಿ ಅಧ್ಯಕ್ಷ ಪ್ರೊ.ಡಿ.ನಂಜುಂಡಯ್ಯ, ಸಹ ಕಾರ್ಯದರ್ಶಿ ಎಚ್. ಶಿವರಾಜ್, ಎಂ.ಸಾವಕಯ್ಯ , ನಿವೃತ್ತ ಇಂಜಿನಿಯರ್ ಆರ್.ನಟರಾಜ್, ರಾಜು ಹಂಪಾಪುರ, ನಿಸರ್ಗಾ ಸಿದ್ದರಾಜು, ಕ್ರಾಂತಿರಾಜ್ ಒಡೆಯರ್, ಪುಟ್ಟಸ್ವಾಮಿ, ದಯಾನಂದಮೂರ್ತಿ, ಕೆ. ಮಹದೇವಯ್ಯ, ಡಾ.ಸತ್ತಿಗೆಹುಂಡಿ ಮಂಜು, ಶಶಿಕಲಾ, ಮಾ.ನಾಗಯ್ಯ, ಪ್ರೇಮಲತಾ, ಬಿ. ಗಾಯತ್ರಿದೇವಿ ಇತರರು ಇದ್ದರು.