

ಕುಶಾಲನಗರ: ಸಾಮಾಜಿಕ ಅಸಮಾನತೆ ಹಾಗೂ ಮೇಲ್ವರ್ಗದವರ ಅಟ್ಟಹಾಸ ಮೇರೆ ಮೀರಿದ್ದ ಸಂದರ್ಭದಲ್ಲಿ ಈ ದೇಶಕ್ಕೆ ಧ್ರುವತಾರೆಯಾಗಿ ಉದಯಿಸಿದ ಮಹಾ ಮಾನವತಾವಾದಿ ಡಾ.ಬಿ. ಆರ್.ಅಂಬೇಡ್ಕರ್ ಅವರ ಜೀವನದ ಸಾಧನೆ ಗಳನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹೆಬ್ಬಾಲೆಯ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಡಾ.ಅಂಬೇಡ್ಕರ್ ಅವರ ಆದರ್ಶಗಳನ್ನು ತಮ್ಮ ಜೀವನ ದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾನತೆಯ ಸಮಾಜವನ್ನು ಕಟ್ಟಬೇಕು ಎಂದು ಹೇಳಿದರು.
ಕಸಾಪ ಜಿಲ್ಲಾ ಸಮಿತಿ ನಿರ್ದೇಶಕ, ಶಿಕ್ಷಕ ಮೆ.ನಾ.ವೆಂಕಟನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್, ಹೆಬ್ಬಾಲೆ ಕಸಾಪ ಅಧ್ಯಕ್ಷ ಮಣಜೂರು ಮೂರ್ತಿ ಮಾತನಾಡಿದರು. ಹೆಬ್ಬಾಲೆ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಸವರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಮಣಜೂರು ವಿಜಯ ಕುಮಾರ್, ಗೌತಮಿ, ದೃಶ್ಯ, ಶಿಕ್ಷಕರಾದ ಕವಿತಾ ಪುಟ್ಟೇಗೌಡ, ಉದಯಕುಮಾರ್, ಸಿ.ಡಿ. ಲೋಕೇಶ್, ಶ್ವೇತಾ ಇದ್ದರು.