

ಚಿತ್ರದುರ್ಗ: ಸಮಾನತೆ, ಸಾಮಾಜಿಕ ನ್ಯಾಯ, ಮಾನವ ಘನತೆ ಮತ್ತು ಹಕ್ಕುಗಳಿಗಾಗಿ ನಾಲ್ಕು ದಶಕಗಳ ಕಾಲ ಹೋರಾಡಿದ ಮಹಾನ್ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಹೇಳಿದರು.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆಗಳು ಜಗತ್ತಿನ ಮಾನವ ಕುಲಕ್ಕೆ ಸರ್ವಕಾಲಕ್ಕೂ ಪ್ರಸ್ತುತವಾಗಿವೆ ಎಂದು ಬಣ್ಣಿಸಿದರು.
ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭಾರತದ ಸಂವಿಧಾನ ಬಲಿಷ್ಠವಾಗಿದೆ. ಎಲ್ಲರಿಗೂ ನ್ಯಾಯ ಸಿಗುವಂತಾಗಿದೆ. ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಬಹಳಷ್ಟು ಅನ್ಯಾಯ ಮಾಡಿದೆ. ಅವರ ಅಂತಿಮ ಸಂಸ್ಕಾರಕ್ಕೂ ಹೊಸದಿಲ್ಲಿಯಲ್ಲಿ ಜಾಗ ಕೊಡಲಿಲ್ಲ. ಇದನ್ನು ದಲಿತ ಸಮುದಾಯಕ್ಕೆ ತಿಳಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕಿದೆ ಎಂದರು.
ಮಾಜಿ ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಅಂಬೇಡ್ಕರ್ ಅವರ ಸಂವಿಧಾನದಿಂದಾಗಿ ನಾವೆಲ್ಲರೂ ಇಂದು ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ. ರಾಜರ ಆಡಳಿತವನ್ನು ಒಗ್ಗೂಡಿಸಿ ಒಂದು ದೇಶವನ್ನಾಗಿ ಮಾಡಬೇಕೆಂಬ ತಮ್ಮ ಕನಸನ್ನು ಸಂವಿಧಾನದ ಮೂಲಕ ಈ ಡೇರಿಸಿದ್ದಾರೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಎ. ಮುರಳಿ, ಕಾರ್ಯದರ್ಶಿ ಮೋಹನ್‌ಕುಮಾರ್ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಸಂಪತ್ ಕುಮಾರ್, ಶ್ಯಾಮಲಾ ಶಿವಪ್ರಕಾಶ್, ಕೆ. ಮಲ್ಲಿಕಾರ್ಜನ್, ಲೋಕೇಶ್, ನಾಗರಾಜ್, ವೆಂಕಟೇಶ್‌ಯಾದವ್, ನಂದಿ ನಾಗರಾಜ್, ಪರಶುರಾಮ್, ಪಾಂಡು, ಶಿವಣ್ಣಾಚಾರ್, ಬಸಮ್ಮ, ಶಾಂತಮ್ಮ, ಗಾಯತ್ರಿ, ಅರುಣ್‌ಕುಮಾರಿ, ಕಿರಣ್, ಲಿಂಗರಾಜು, ಛಲವಾದಿ ತಿಪ್ಪೇಸ್ವಾಮಿ ದಗ್ಗೆ ಶಿವಪ್ರಕಾಶ್ ಇತರರು ಇದ್ದರು.
ಎಸ್‌ಜೆಎಂ ಪಾಲಿಟೆಕ್ನಿಕ್‌ನಲ್ಲಿ ಆಚರಣೆ
ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಪ್ರಾಧ್ಯಾಪಕರಾದ ಗಂಗಾಧರ್, ಗೋವಿಂದರಾಜ್, ಅಧೀಕ್ಷಕ ಸಿ.ಎನ್. ಮೋಹನ್, ಗ್ರಂಥಪಾಲಕ ಎಂ. ವೀರಯ್ಯ, ಸಿಬ್ಬಂದಿ ಜಿ. ಕೊಟ್ರಪ್ಪ, ಟಿ.ಎನ್.ಲಿಂಗರಾಜು, ಎಂ.ಜೆ. ರುದ್ರಮೂರ್ತಿ ಮಾತನಾಡಿದರು. ವಿಭಾಗದ ಮುಖ್ಯಸ್ಥರಾದ ವಿ.ಟಿ.ರವಿ, ಸಿ. ಮಲ್ಲಿಕಾರ್ಜುನ ಹಾಗೂ ಜಿ.ಎಸ್.ಗುರುನಾಥ್ ಇತರರು ಇದ್ದರು.
--------------