ಅಂಬೇಡ್ಕರ್ ಚಿಂತನಾಶೀಲತೆಯ ದೂರದೃಷ್ಟಿ ಸ್ಫೂರ್ತಿದಾಯಕ

Published on

ಹನೂರು: ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾಭೂಮಿಗೆ ತೆರಳುತ್ತಿರುವ ಪ್ರತಿಯೊಬ್ಬರೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಹಾಗೂ ಚಿಂತನೆಗಳ ಬಗ್ಗೆ ಇನ್ನಷ್ಟು ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ತಹಸೀಲ್ದಾರ್ ಕೆ.ಎನ್ ಚೈತ್ರಾ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಮಂಗಳವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಅವರ ನಾಗಪುರ ದೀಕ್ಷಾಭೂಮಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರು ಅಸ್ಪಶ್ಯತೆ ತೊಡೆದು ಹಾಕುವುದರ ಮೂಲಕ ದೇಶದ ಸಮಾನತೆಗಾಗಿ ಸಂವಿಧಾನವನ್ನು ಕೊಡುಗೆ ನೀಡಿದ ಧೀಮಂತ ನಾಯಕ. ಇವರ ಚಿಂತನಾಶೀಲತೆಯ ದೂರದೃಷ್ಟಿ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜತೆಗೆ ಧ್ಯೇಯಗಳನ್ನು ಅರ್ಥಮಾಡಿಕೊಳ್ಳಬೇಕು. ಈ ದೆಸೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರತಿವರ್ಷ ತಾಲೂಕಿನಿಂದ ಅಂಬೇಡ್ಕರ್ ಅವರ ದೀಕ್ಷಾಭೂಮಿ ಯಾತ್ರೆಯನ್ನು ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಜನರು ಅಂಬೇಡ್ಕರ್ ಅವರು ಹೊಂದಿದ್ದ ನಿಲುವು ಹಾಗೂ ಜೀವನ ಚರಿತ್ರೆಯನ್ನು ಇನ್ನಷ್ಟು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಯಾತ್ರೆಗೆ ತೆರಳುತ್ತಿರುವ ಎಲ್ಲರ ಪ್ರಯಾಣವು ಸುಖಕರವಾಗಿರಲಿ ಎಂದು ಹಾರೈಸಿದರು. ಸಮಾಜ ಕಲ್ಯಾಣ ಇಲಾಖೆಯ ನೌಕರ ರಮೇಶ್, ಯಾತ್ರಿಗಳಾದ ಪ್ರಭುಸ್ವಾಮಿ, ನಾಗರಾಜು, ರಂಗಸ್ವಾಮಿ, ಬಸವರಾಜು, ರುದ್ರ, ನಿರಂಜನ್, ಸಿದ್ದರಾಜು, ಸೋಮಣ್ಣ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net