

ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆಗಾಗಿ ವಸತಿ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭಾನುವಾರ ನಗರದಲ್ಲಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು.
ನಗರದ ಹೊರ ವಲಯದಲ್ಲಿರುವ ಯಡಬೆಟ್ಟದ ಬಳಿಯ ಮೆಡಿಕಲ್ ಕಾಲೇಜು ಬಳಿ ಇರುವ ಜೆಎಸ್‌ಎಸ್‌ಗೆ ಸೇರಿದ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಿಸಿದರು. ನಂತರ ನಗರದ ಪ್ರಮುಖ ಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮುಖ್ಯಮಂತ್ರಿಯವರ ಕಾರ್ಯಕ್ರಮಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣವೇ ಸೂಕ್ತವೆಂದು ಇಲ್ಲಿಯೇ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು. ಅಧಿಕಾರಿಗಳೊಂದಿಗೆ ಕ್ರೀಡಾಂಗಣ ಪರಿಶೀಲಿಸಿದ ಸಚಿವರು, ಪ್ರಸ್ತುತ ಇರುವ ತೇವಾಂಶ ಹೋಗಲಾಡಿಸುವ ಹಾಗೂ ನೀರು ಹರಿದಿರುವುದನ್ನು ತಡೆಯುವ ಕೆಲಸವನ್ನು ಕೂಡಲೇ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಎಲ್ಲ ರೀತಿಯಲ್ಲಿಯೂ ಕಾರ್ಯಕ್ರಮಕ್ಕೆ ಸೂಕ್ತವಾಗಿದೆ. ಹೀಗಾಗಿ ಕ್ರೀಡಾಂಗಣವನ್ನು ಅಚ್ಚುಕಟ್ಟಾಗಿ ಸಜ್ಜುಗೊಳಿಸಬೇಕು. ಕಾರ್ಯಕ್ರಮದ ಸಿದ್ಧತೆಗಾಗಿ ಕೈಗೊಳ್ಳಬೇಕಿರುವ ಕಾರ್ಯವನ್ನು ತುರ್ತಾಗಿ ನಿರ್ವಹಿಸಬೇಕು. ಕಾರ್ಯ ಕ್ರಮದಲ್ಲಿ ಹೆಚ್ಚು ಜನರು ಕುಳಿತುಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಶಾಮಿಯಾನ, ಆಸನಗಳು, ಸಮಾರಂಭಕ್ಕೆ ಎತ್ತರದ ವೇದಿಕೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಮಳೆಯಿಂದ ಕ್ರೀಡಾಂಗಣದಲ್ಲಿ ನೀರು ನಿಂತಿದ್ದು, ತೇವಾಂಶ ಹೆಚ್ಚಿದೆೆ. ಇದನ್ನು ಸರಿಪಡಿಸಬೇಕಿದೆ. ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ವೇದಿಕೆ ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲೇ ಆಯೋಜಿಸುವುದರಿಂದ ವಿವಿಧ ಯೋಜನೆಯ ಲಾನುಭವಿಗಳು, ಸಾವರ್ಜನಿಕರು ಬರಲು ಅನುಕೂಲವಾಗಲಿದೆ. ಹೀಗಾಗಿ ಕಾರ್ಯಕ್ರಮ ಆಯೋಜನೆಗೆ ಕ್ರೀಡಾಂಗಣ ಸಜ್ಜುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ವಿ.ಸೋಮಣ್ಣ ವಿವರಿಸಿದರು.
ಜಿಲ್ಲೆಗೆ ಸಿಎಂ ಭೇಟಿ ನಿಶ್ಚಿತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ನವೆಂಬರ್ ಇಲ್ಲವೇ ಡಿಸೆಂಬರ್‌ನಲ್ಲಿ ಭೇಟಿ ನೀಡುವುದು ನಿಶ್ಚಿತ. ಭೇಟಿಯ ದಿನಾಂಕವನ್ನು ನಾಳೆ(ಸೋಮವಾರ)ಯೊಳಗೆ ಪ್ರಕಟಿಸಲಾಗುತ್ತದೆ. ಚಾಮರಾಜನಗರ ಪಟ್ಟಣಕ್ಕೂ ಮುಖ್ಯಮಂತ್ರಿಯವರು ಬರಲಿದ್ದಾರೆ. ಬಳಿಕ ಹನೂರು, ಮಲೆಮಹದೇಶ್ವರ ಬೆಟ್ಟಕ್ಕೂ ಭೇಟಿ ನೀಡಲಿದ್ದಾರೆ. ಚಾಮರಾಜನಗರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲೇ ಮುಖ್ಯಮಂತ್ರಿಯವರ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಸಚಿವ ಸೋಮಣ್ಣ ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್‌ರಾಜ್, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ತಹಸೀಲ್ದಾರ್ ಬಸವರಾಜು, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಾದ ವಿನಯ್‌ಕುಮಾರ್, ಆರ್.ಸಿ.ಕೆಂಪರಾಜು, ಪಂಚಾಯತ್‌ರಾಜ್ ಇಂಜಿನಿಯರ್ ಇಬ್ರಾಹಿಂ, ಸೆಸ್ ್ಕಇಇ ವಸಂತ್‌ಕುಮಾರ್, ನಗರಸಭೆ ಆಯುಕ್ತ ರಾಮದಾಸ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.