ಅಂಬೇಡ್ಕರ್ ಕುರಿತು ಜಿಲ್ಲಾ ಮಟ್ಟದ ವಿಚಾರಗೋಷ್ಠಿ

23 ckm 3 deepak doddaiah
ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ
Published on

ಚಿಕ್ಕಮಗಳೂರು: ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಯಾತ್ರೆಯ ಅಂಗವಾಗಿ ಏ. ೨೫ರಂದು ಮಧ್ಯಾಹ್ನ ೪ ಗಂಟೆಗೆ ಮೂಡಿಗೆರೆಯ ಬಿಜೆಪಿ ಕಚೇರಿ ಪಂಚವಟಿಯಲ್ಲಿ ಜಿಲ್ಲಾಮಟ್ಟದ ವಿಚಾರಗೋಷ್ಠಿ ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೇಗೆ ಅಗೌರವಿಸಿತು, ಜೊತೆಗೆ ಅವರನ್ನು ಹೇಗೆ ಬಳಸಿ ಕೊಂಡಿತು ಎಂಬ ಬಗ್ಗೆ ವಿಚಾರಗೋಷ್ಠಿಯಲ್ಲಿ ಚರ್ಚೆ ನಡೆಸಲಾಗುವುದು ಎಂದರು.

ವಿಚಾರಗೋಷ್ಠಿಯನ್ನು ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೂಡಿಗೆರೆ ಬಿಜೆಪಿ ಮಂಡಲ ಮತ್ತು ಆಲ್ದೂರು ಮಂಡಲ ಜಂಟಿಯಾಗಿ ಆಯೋಜಿಸಿವೆ. ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಸಚಿವ ಎನ್. ಮಹೇಶ್ ವಿಷಯ ಮಂಡಿಸಲಿದ್ದಾರೆ. ಪಕ್ಷದ ಜಿಲ್ಲಾಮಟ್ಟದ ಮುಖಂಡರು ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

೧೯೪೮ರ ಏ. ೨೫ರಂದು ಅಂಬೇಡ್ಕರ್ ಅವರು ಕಾಂಗ್ರೆಸ್ ಒಂದು ಸುಡುವ ಮನೆ. ಅದನ್ನು ಪ್ರವೇಶಿಸುವುದರಿಂದ ನಾವು ಪ್ರಗತಿಶೀಲರಾಗಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಸೇರಬೇಡಿ ಎಂದು ಹೇಳಿದ್ದರು. ಬಾಬಾ ಸಾಹೇಬರ ಸಮಗ್ರ ಬರಹಗಳು ೧೭ನೇ ಸಂಪುಟದ ೩೮೮ನೇ ಪುಟದಲ್ಲಿ ಇದನ್ನು ಕಾಣಬಹುದಾಗಿದೆ. ಅಂಬೇಡ್ಕರ್ ಅವರ ಈ ಹೇಳಿಕೆಗೆ ೭೭ ವರ್ಷಗಳು ತುಂಬುತ್ತಿದೆ. ಜೊತೆಗೆ ಅಂಬೇಡ್ಕರ್ ನಿಪ್ಪಾಣಿಗೆ ಭೇಟಿ ನೀಡಿ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ವಿಚಾರ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಜಿಲ್ಲಾ ಮಟ್ಟದ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅಂಬೇಡ್ಕರ್ ಅವರು ಕಾಂಗ್ರೆಸ್ಸನ್ನು ಒಂದು ಸುಡುವ ಮನೆ ಎಂದು ಹೇಳಿದ್ದು ಏಕೆ? ಎಂಬ ವಿಷಯದ ಮೇಲೆ ಚರ್ಚೆ ಆಗಬೇಕು ಎಂಬುದು ಎಲ್ಲರ ಆಶಯವಾಗಿದೆ. ಹೀಗಾಗಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳ ಪ್ರಮುಖರು, ಸಾಮಾಜಿಕ ಕಾರ್ಯಕರ್ತರು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೋಷ್ಠಿಗೆ ಆಗಮಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಬಿಜೆಪಿ ಮುಖಂಡರಾದ ಸೀತಾರಾಮ ಭರಣ್ಯ, ಕುರುವಂಗಿ ವೆಂಕಟೇಶ್, ಮುಖೇಶ್, ಅರುಣ್, ಸುನೀಲ್, ವಿನಯ್ ಹಳೆಕೋಟೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net