

ನಾಗಮಂಗಲ: ಡಾ.ಬಿ.ಆರ್.ಅಂಬೇಡ್ಕರ್ ಫೋಟೊ ಇಟ್ಟು ಕುಣಿದು ಕುಪ್ಪಳಿಸಿ ಸಂಭ್ರಮಿಸಿ ಆಚರಣೆ ಮಾಡುವ ಬದಲು ಅವರ ಆಶಯಗಳನ್ನು ಪಾಲಿಸಿ ಅನುಸರಿಸಬೇಕಿದೆ ಎಂದು ಪ್ರೊ.ಬಿಪಿನ್ ನಾಗರಾಜು ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್‌ಜಯಂತಿ ಮತ್ತು ಡಾ.ಬಾಬು ಜಗಜೀವನರಾಮ್ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ರಚಿಸಿದ ನಂತರ ಅಂಬೇಡ್ಕರ್ ನಾನು ಬರೆದಿರುವ ಸಂವಿಧಾನ ಯತ್ತಾವತ್ತಾಗಿ ಜಾರಿಗೆ ಬಂದರೆ 20 ವರ್ಷಗಳಲ್ಲಿ ಭಾರತ ಪ್ರಬುದ್ಧತೆಯ ರಾಷ್ಟ್ರವಾಗಲಿದೆ ಎಂದಿದ್ದರು. ಆದರೆ 70 ವರ್ಷಗಳು ಕಳೆದರೂ ಸಂವಿಧಾನದಲ್ಲಿರುವುದನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲದಿರುವುದು ದುರಂತ. ಅಂಬೇಡ್ಕರ್ ಅವರಂತಹ ಮಹನೀಯರನ್ನು ಕೇವಲ ದಲಿತರಿಗೆ ಮಾತ್ರ ಸೀಮಿತ ಮಾಡುತ್ತಿರುವುದು ವಿಪರ್ಯಾಸ. ಅಂಬೇಡ್ಕರ್ ನಾನು ದಲಿತ ಎಂದು ಎಲ್ಲಿಯೂ ಹೇಳಿಲ್ಲ. ದಲಿತ ಎಂದರೆ ಒಂದು ಜಾತಿಯಲ್ಲ, ಶೋಷಣೆಗೆ ಒಳಗಾದವರು, ತುಳಿತಕ್ಕೆ ಒಳಗಾದವರು ಎಂದರ್ಥ. ಶೋಷಿತ ಜಾತಿಗಳೆಲ್ಲರೂ ನನ್ನ ಜಾತಿ ಎಂದು ಹೇಳಿದ್ದರು ಎಂದು ಸ್ಮರಿಸಿದರು.
ಬಸವಣ್ಣ, ವಾಲ್ಮೀಕಿ, ಕನಕದಾಸರು, ಕುವೆಂಪು ಎಂದಿಗೂ ಒಂದು ಜಾತಿಗೆ ಸೀಮಿತ ಎಂದು ಹೇಳಿದವರಲ್ಲ. ಆದರೆ ಈ ಎಲ್ಲ ಮಹನೀಯರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ಇಂತಹ ಮಹಾನ್ ವಿಶ್ವನಾಯಕರನ್ನು ಒಂದು ಜಾತಿಗೆ ಸೀಮಿತಗೊಳಿಸಿಕೊಂಡು ಕೋಮು ದಳ್ಳುರಿಗೆ ಕಾರಣೀಬೂತರಾಗಿದ್ದೇವೆ. ಸಂಕುಚಿತ ಮನೋಭಾವವನ್ನು ತೊಡೆದುಹಾಕಿ ಎಲ್ಲರೂ ಸಮಾನರು ಎಂಬ ಪರಿಕಲ್ಪನೆಯಲ್ಲಿ ಬಾಳೊಣ, ಪ್ರಬುದ್ಧ ಭಾರತವನ್ನು ನಿರ್ಮಿಸೊಣ ಎಂದರು.
ಅಂಬೇಡ್ಕರ್ ಮೀಸಲಾತಿ ನೀಡಿಲ್ಲ: ಮೀಸಲಾತಿ ಎಂಬುದನ್ನು ಅಂಬೇಡ್ಕರ್ ಅವರು ಎಲ್ಲಿಯೂ ಹೇಳಿಲ್ಲ. ನಿಮ್ಮ ಜಾತಿವಾರು ಪ್ರಾತಿನಿಧ್ಯ ತೆಗೆದುಕೊಳ್ಳಲು ಹೇಳಿದ್ದರೆ ಹೊರತು ಮೀಸಲಾತಿಯನ್ನು ಅವರು ಎಲ್ಲಿಯೂ ಹೇಳಿಲ್ಲ. ಒಂದು ವರ್ಗದ ಪರವಾಗಿ ಅಂಬೇಡ್ಕರ್ ಪ್ರಸ್ತಾಪಿಸಿಲ್ಲ. ಜಾತಿವಾರು ಪ್ರಾತಿನಿಧ್ಯತೆ ತೆಗೆದುಕೊಳ್ಳಲು ತಿಳಿಸಿದ್ದಾರೆಯೇ ಹೊರತು ಒಂದು ಜಾತಿಗೆ ಸೀಮಿತವಾಗಿ ಇಂತಿಷ್ಟು ಮೀಸಲಾತಿ ನೀಡಿ ಎಂದು ಪ್ರತಿಪಾದಿಸಿಲ್ಲ. ಮೀಸಲಾತಿಯನ್ನು ಛತ್ರಪತಿ ಸಾಹುಮಹಾರಾಜರು ಜಾರಿಗೆ ತಂದಿದ್ದು. ಆದರೆ ಜನತೆ ಅಂಬೇಡ್ಕರ್ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇಂದು ಸಂವಿಧಾನ ಅಪಾಯದಲ್ಲಿದೆ. ಸಂವಿಧಾನ ಯತ್ತವತ್ತಾಗಿ ಉಳಿಯಬೇಕಿದೆ. ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡಬೇಕಿದೆ ಎಂದರು.
ತಹಸೀಲ್ದಾರ್ ನಯೀಂ ಉನ್ನಿಸಾ ಮಾತನಾಡಿ, ಅಂಬೇಡ್ಕರ್ ಅವರು ಸಮಾನತೆ ಸ್ಥಾಪಿಸಿದ ಹರಿಕಾರರು. ಅವರು ಅಂದು ನೀಡಿದ ಸಂವಿಧಾನದಿಂದ ಇಂದು ನಾವೆಲ್ಲ ಇಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿದೆ. ಮತದಾನದ ಹಕ್ಕು ಹಾಗೂ ಮಹಿಳೆಯರಿಗೆ ಶಿಕ್ಷಣದ ಹಕ್ಕು ಮತ್ತು ಸ್ತ್ರೀ ಸ್ವಾತಂತ್ರ್ಯ ನೀಡಿದ್ದರಿಂದ ಇಂದು ದೇಶದಲ್ಲಿ ಸಮಾನತೆ ಕಾಣಲು ಸಾಧ್ಯವಾಗಿದೆ. ಅವರನ್ನು ಕೇವಲ ಒಂದೆರಡು ದಿನಗಳಿಗೆ ಸೀಮಿತಗೊಳಿಸದೆ ಅವರ ಆಶಯಗಳನ್ನು ಅನುಸರಿಸುವ ಕೆಲಸ ಪ್ರತಿನಿತ್ಯವಾಗಬೇಕಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ತಾಲೂಕು ಆಡಳಿತಸೌಧದ ಆವರಣದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ರಾಜಕಾರಣಿಗಳಿಂದ ಮಾಲಾರ್ಪಣೆ : ತಾಲೂಕು ಆಡಳಿತ ಸೌಧದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕ ಸುರೇಶ್‌ಗೌಡ ಬೆಂಬಲಿಗರೊಂದಿಗೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಲಕ್ಷ್ಮೀನಾರಾಯಣ್ ಪ್ರಸಾದ್, ಸಿಪಿಐ ನಿರಂಜನ್, ತಾ.ಪಂ.ಇಒ ಚಂದ್ರಮೌಳಿ, ಡಾ.ಎಂ ಶ್ರೀನಿವಾಸ್‌ಮೂರ್ತಿ, ಚಂದ್ರಶೇಖರ್, ಗ್ರೇಡ್ -2 ತಹಸೀಲ್ದಾರ್ ಸ್ವಾಮೀಗೌಡ, ವಲಯ ಅರಣ್ಯಾಧಿಕಾರಿ ಮಂಜುನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿನೋದ್ ಸೇರಿದಂತೆ ಮತ್ತಿತರರಿದ್ದರು.