

ಬಸವಕಲ್ಯಾಣ: ಅಂಬಾರಿ ಹೊತ್ತು ಹೆಜ್ಜೆ ಹಾಕಿದ ಆನೆ, ಗಮನ ಸೆಳೆದ ಬಸವಾದಿ ಶರಣರ ವೇಷಧಾರಿಗಳು, ಸಾಂಸ್ಕೃತಿಕ ವೈಭವ ಅನಾವರಣಗೊಳಿಸಿದ ಕಲಾ ತಂಡಗಳ ಪ್ರದರ್ಶನ, ವಿದ್ಯಾರ್ಥಿಗಳ ವಚನ ನೃತ್ಯ. ವಚನ ಗಾಯನಕ್ಕೆ ಭಕ್ತಿಯಿಂದ ಹೆಜ್ಜೆ ಹಾಕಿದ ಯುವ ಸಮೂಹ. ಮೊಳಗಿದ ಜೈಘೋಷ. ಬಸವ ಜಯಂತಿ ನಿಮಿತ್ತ ಬಸವಣ್ಣನವರ ಕಾಯಕ ಭೂಮಿ ಕಲ್ಯಾಣದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಮಹಾತ್ಮ ಬಸವೇಶ್ವರರ ಜಾತ್ರಾ ಅಮೃತ ಮಹೋತ್ಸವ ಅಂಗವಾಗಿ ಬುಧವಾರ ನಡೆದ ಅದ್ದೂರಿಯ ಬೆಳ್ಳಿ ತೊಟ್ಟಿಲು ಮೆರವಣಿಗೆಯಲ್ಲಿ ಕಂಡು ಬಂದ ವೈಭವ.
ಶ್ರೀ ಬಸವೇಶ್ವರ ದೇಸ್ಥಾನದಿಂದ ಐತಿಹಾಸಿಕ ಕೋಟೆ, ಗಾಂಧಿ ವೃತ್ತ, ಬಸವ ವೃತ್ತ, ಅಂಬೇಡ್ಕರ್ ವೃತ್ತ ಮೂಲಕ ಮುಖ್ಯರಸ್ತೆ ಮಾರ್ಗವಾಗಿ ಹರಳಯ್ಯ ವೃತ್ತದವರೆಗೆ ಮೆರವಣಿಗೆ ದೇವಸ್ಥಾನಕ್ಕೆ ಮರಳಿತು. ನಗರ ವಿವಿಧ ಗ್ರಾಮಗಳಿಂದ ಆಗಮಿಸಿದ ಬಸವ ಭಕ್ತರು ಜಾತ್ರಾ ಅಮೃತ ಮಹೋತ್ಸವ ಎಂದು ಬರೆದ ಟೋಪಿ ಧರಿಸಿದ್ದರು.
ಮಂಟಪದ ಮಾದರಿಯಲ್ಲಿ ಅಲಂಕೃತ ವಾಹನದಲ್ಲಿ ಬೆಳ್ಳಿ ತೊಟ್ಟಿಲು, ಸಾರೋಟಿನಲ್ಲಿ ಬಸವಾದಿ ಶರಣರ ವೇಷಧಾರಿಗಳು, ವಾಹನಗಳ ಮೇಲೆ ವಚನ ಪಿತಾಮಹ ಫ.ಗು.ಹಳಕಟ್ಟಿ, ಬಾಬಾಸಾಬ ವಾರದ ಭಾವಚಿತ್ರ ಇದ್ದರೆ, ಇನ್ನೊಂದು ತೆರೆದ ವಾಹನದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಶಾಲಾ ವಿದ್ಯಾರ್ಥಿಗಳಿಂದ ವಚನಗಳ ಹಾಡಿಗೆ ನಡೆದ ನೃತ್ಯ, ಕೋಲಾಟ ಗಮನ ಸೆಳೆಯಿತು.
ಅಂಬಾರಿ ಹೊತ್ತ ಆನೆ ಗಂಭೀರತೆಯಿಂದ ಹಜ್ಜೆ ಹಾಕಿ ಮೆರವಣಿಗೆಯ ಆಕರ್ಷಣೆಯಾಗಿತ್ತು. ಛತ್ರಿ, ಚಾಮರಗಳೊಂದಿಗೆ ಕುದುರೆಯ ಮೇಲೆ ಕುಳಿತ ಬಸವಣ್ಣ ಹಾಗೂ ಅಕ್ಕ ಮಹಾದೇವಿ ವೇಷಧಾರಿಗಳು ಮೆರವಣಿಗೆ ಅಂದ ಹೆಚ್ಚಿಸಿದರೆ, ಪಾರಂಪರಿಕ ಲಂಬಾಣಿ ನೃತ್ಯ, ಡೊಳ್ಳು ಕಲಾ ತಂಡ, ಗೊಂಬೆ ಕುಣಿತ, ಕೋಲಾಟ, ಸ್ಥಳೀಯ ಹಾಗೂ ನಾಡಿನ ವಿವಿಧೆಡೆಯಿಂದ ಆಗಮಿಸಿದ ಕಲಾ ತಂಡಗಳ ಪ್ರದರ್ಶನ, ಹೈಸೌಂಡ್ ಸಿಸ್ಟಮ್ ಎದುರು ವಚನ ಗಾಯಕ್ಕೆ ಯುವಕರ ನೃತ್ಯ ಗಮನ ಸೆಳೆಯಿತು.
ಬೆಳ್ಳಿ ತೊಟ್ಟಿಲು ಪೂಜೆಯನ್ನು ಶ್ರೀ ಅಮೃತಾನಂದ ಸ್ವಾಮೀಜಿ ನೆರವೇರಿಸಿದರು. ಶಾಸಕ ಶರಣು ಸಲಗರ ಮೆರವಣಿಗೆಗೆ ಚಾಲನೆ ನೀಡಿದರು. ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಶ್ರೀ ರಾಜೇಶ್ವರ ಶಿವಾಚಾರ್ಯರು, ಖೇರ್ಡಾದ ಶ್ರೀ ಶಿವಲಿಂಗ ಸ್ವಾಮೀಜಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಎಂಎಲ್ಸಿ ವಿಜಯಸಿಂಗ್, ನಗರಸಭೆ ಅಧ್ಯಕ್ಷ ಸಗೀರೋದ್ದಿನ್, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಚಿರಡೆ, ಡಾ. ಜಿ.ಎಸ್ ಭುರಳೆ, ರಾಜಕುಮಾರ ಹೊಳಕುಂದೆ, ಶ್ರೀಕಾಂತ ಬಡದಾಳೆ, ವಿವೇಕಾನಂದ ಹೊದಲೂರೆ, ವೀರಣ್ಣ ಹಲಶೆಟ್ಟೆ, ಸುಭಾಷ ಹೊಳಕುಂದೆ, ಮಲ್ಲಯ್ಯ ಹಿರೇಮಠ, ಅಶೋಕ ನಾಗರಾಳೆ, ಕಾಶೆಪ್ಪ ಸಕ್ಕರಬಾವಿ, ಜಗನ್ನಾಥ ಖೂಬಾ, ಭದ್ರಿನಾಥ ಪಾಟೀಲ, ಅನೀಲಕುಮಾರ ರಗಟೆ, ರೇವವಣಪ್ಪ ರಾಯವಾಡೆ, ವಿಜಯಲಕ್ಷ್ಮೀ ಗಡ್ಡೆ, ನಾಗಯ್ಯ ಸ್ವಾಮಿ, ಶಿವರಾಜ ಶಾಶೆಟ್ಟೆ, ಗದಗೆಪ್ಪಾ ಹಲಶೆಟ್ಟೆ, ಬಸವರಾಜ ಪಾಟೀಲ, ಸೋಮಶೇಖರ ವಸ್ತçದ, ಮಲ್ಲಿಕಾರ್ಜುನ ಮಂಠಾಳೆ, ತಹಸೀಲ್ದಾರ್ ಡಾ.ದತ್ತಾತ್ರೆ ಗಾದಾ, ಪೌರಾಯುಕ್ತ ರಾಜು ಬಣಕಾರ, ಪ್ರಮುಖರಾದ ಸುನೀಲ ಪಾಟೀಲ್, ಪ್ರದೀಪ ವಾತಡೆ, ಬಸವರಾಜ ಸ್ವಾಮಿ, ಶಿವರಾಜ ನರಶೆಟ್ಟಿ, ಅನೀಲ ಭೂಸಾರೆ, ನೀಲಕಂಠ ರಾಠೋಡ, ಡಾ.ಪ್ರಥ್ವಿರಾಜ ಬಿರಾದಾರ, ರವಿ ಚಂದನಕೆರೆ, ಬಸವರಾಜ ಬಾಲಿಕಿಲೆ, ಬಸವರಾಜ ತೊಂಡಾರೆ, ಅರ್ಜುನ ಕನಕ, ಮನೋಹರ ಮೈಸೆ, ಶಂಕರ ಕರ್ಣೆ, ಯುವರಾಜ ಭೆಂಡೆ, ದೀಪಕ ಗಾಯಕವಾಡ, ರವಿ ಕೊಳಕೂರ, ಶಿವಕುಮಾರ ಬಿರಾದಾರ, ಜಗನ್ನಾಥ ಪಾಟೀಲ, ಸಂಜು ಮೆಟಗೆ, ಸುಭಾಷ ಬಾವುಗೆ, ಸಂಗಮೇಶ ಅವಸೆ, ಸುನೀಲ ಹೊಳಕುಂದೆ ಮತ್ತು ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.
ಅಮೃತ ಘಳಿಗೆ: ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರ ಜಾತ್ರೆಯ ಅಮೃತ ಮಹೋತ್ಸವದ ಅಮೃತ ಘಳಿಗೆ ಇದಾಗಿದೆ. ಬಸವಣ್ಣನವರ ಜಾತ್ರೆ ಕಲ್ಯಾಣದ ಜಾತ್ರೆ ಅಲ್ಲ. ಇದು ಭಾರತದ ಜಾತ್ರೆ ಆಗಬೇಕು. ರಾಷ್ಟ್ರೀಯ ಮಟ್ಟದಲ್ಲಿ ಬಸವ ಜಯಂತಿ ಆಚರಣೆಯಾಗಲಿ ಎಂದು ಹುಲಸೂರನ ಶ್ರೀ ಡಾ.ಶಿವಾಂದ ಮಹಾಸ್ವಾಮೀಜಿ ಆಶಯ ವ್ಯಕ್ತಪಡಿಸಿದರು. ಶ್ರೀ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿ ಶ್ರೀಗಳು, ಕೂಡಲ ಸಂಗಮದಲ್ಲಿ ಆಯೋಜಿಸಲಾಗಿರುವ ಅನುಭವ ಮಂಟಪ- ಬಸವಾದಿ ಶರಣರ ವೈಭವ ಕಾರ್ಯಕ್ರಮ ಬಸವಣ್ಣನವರ ಕಾಯಕ ಭೂಮಿ ಕಲ್ಯಾಣದಲ್ಲಿ ನಡೆಯಬೇಕಿತ್ತು ಎಂದರು. ವಚನ ಸಾಹಿತ್ಯದ ಮೂಲಕ ಇಡೀ ಮಾನವ ಕುಲಕ್ಕೆ ಮಾನವೀಯ ಮೌಲ್ಯ ಸಾರಿದವರು ಬಸವಣ್ಣನವರು. ವಚನಗಳು ಕಂಠಪಾಠ ಮಾಡಿದರೆ ಸಾಲದು, ಜೀವನದಲ್ಲಿ ಪಾಲನೆ ಮಾಡಬೇಕು. ೧೨ನೇ ಶತಮಾನದ ಬಸವಾದಿ ಶಿವಶರಣರ ವಚನಗಳು ಕೇವಲ ಕರ್ನಾಟಕಕ್ಕೆ ಸೀಮಿತಗೊಳ್ಳದೇ ದೇಶಾದ್ಯಂತ ಪ್ರಚಾರ-ಪ್ರಸಾರವಾಗಬೇಕು ಎಂದರು.
ವರ್ಷದಲ್ಲಿ ಅನುಭವ ಮಂಟಪ ಲೋಕಾರ್ಪಣೆ: ಬಸವಕಲ್ಯಾಣದಲ್ಲಿ ರಾಜ್ಯ ಸರ್ಕಾರದಿಂದ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪ ಕಾಮಗಾರಿ ಪ್ರಗತಿಯಲ್ಲಿದ್ದು, ಅಗತ್ಯವಿರುವ ಅನುದಾನ ಒದಗಿಸಿ ಮುಂದಿವ ವರ್ಷ ಏಪ್ರಿಲ್ ಒಳಗಾಗಿ ಉದ್ಘಾಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು. ಮಹಾತ್ಮ ಬಸವೇಶ್ವರರ ಜಾತ್ರಾಅಮೃತ ಮಹೋತ್ಸವ ನಿಮಿತ್ತ ಬುಧವಾರ ಬೆಳ್ಳಿ ತೊಟ್ಟಿಲ ಮೆರವಣಿಗೆ ಸಂದರ್ಭದಲ್ಲಿ ಬಸವ ವೃತ್ತ ಬಳಿ ಶ್ರೀಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಚಿವರು, ಸಮ ಸಮಾಜಕ್ಕಾಗಿ ನಡೆದ ಕಲ್ಯಾಣ ಕ್ರಾಂತಿ ಜಗತ್ತಿಗೆ ಮಾದರಿ. ಧಾರ್ಮಿಕ, ಆಧ್ಯಾತ್ಮಿಕ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವಾಗಿ ಕಲ್ಯಾಣ ಅಭಿವೃದಿ ಹೊಂದಬೇಕು. ಈ ಕಾರ್ಯಕ್ಕೆ ಸರ್ಕಾರ ಬದ್ಧವಾಗಿದೆ ಎಂದರು. ಜಾತ್ರಾ ಮಹೋತ್ಸವ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಬಸವಣ್ಣನವರ ತತ್ವ ಸಂದೇಶಗಳನ್ನು ಎಲ್ಲರೂ ಜೀವನದಲ್ಲಿ ಆಳವಡಿಸಿಕೊಂಡರೆ ಆಚರಣೆ ಸಾರ್ಥಕವಾಗುತ್ತದೆ ಎಂದರು.
ಗಮನ ಸೆಳೆದ ಡ್ಯಾನ್ಸ್: ಮೆರವಣಿಗೆಯಲ್ಲಿ ಬಸವ ವೃತ್ತ ಬಳಿ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪ್ರಮುಖರೊಂದಿಗೆ ಡ್ಯಾನ್ಸ್ ಮಾಡಿ ಗಮನ ಸೆಳೆದರು. ಶಾಸಕ ಶರಣು ಸಲಗರ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಎಂಎಲ್ಸಿ ವಿಜಯಸಿಂಗ್, ದೇವಸ್ಥಾನ ಸಮಿತಿ ಪದಾಧಿಕಾರಿಗಳು ಸಾಥ್ ನೀಡಿದರು.