

ಮೈಸೂರು: ದಸರಾದಲ್ಲಿ ಭಾಗವಹಿಸಲು ಈಗಾಗಲೇ ನಗರಕ್ಕೆ ಆಗಮಿಸಿರುವ ಗಜಪಡೆಗೆ ಶುಕ್ರವಾರ ಭಾರ ಹೊರಿಸುವ ತಾಲೀಮು ಆರಂಭಗೊಂಡಿತು. ಅಂಬಾರಿ ಹೊರುವ ಕ್ಯಾಪ್ಟನ್ ‘ಅಭಿಮನ್ಯು’ ಸುಮಾರು 600 ಕೆ.ಜಿ. ಭಾರ ಹೊತ್ತು ಬನ್ನಿಮಂಟಪದ ವರೆಗೆ ನಿರಾಯಾಸವಾಗಿ ಹೆಜ್ಜೆ ಹಾಕಿ ಮರಳಿದರೆ, ತಂಡದ ಇನ್ನಿತರ ಆನೆಗಳು ಜತೆಯಲ್ಲಿ ಸಾಗಿದವು.
ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಸಂಪ್ರದಾಯದಂತೆ ಆನೆಗಳ ಬೆನ್ನಿನ ಮೇಲೆ ಗಾದಿ, ನಮ್ದಾ ಇಟ್ಟು, ಅಭಿಮನ್ಯು, ವಿಜಯ ಮತ್ತು ವರಲಕ್ಷ್ಮೀ ಆನೆಗಳ ಪಾದ ತೊಳೆದು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಿಸಿಎಫ್ ಮಾಲತಿಪ್ರಿಯಾ ಆನೆಗಳಿಗೆ ಪುಷ್ಪಾರ್ಚನೆ ಮಾಡಿ, ಪಂಚಲದೊಂದಿಗೆ ಬೆಲ್ಲ ಮತ್ತು ಕಬ್ಬನ್ನು ನೀಡಿದರು.
ಅಭಿಮನ್ಯು ಬೆನ್ನಿಗೆ 250 ಕೆ.ಜಿ. ತೂಕದ ಗಾದಿ ಮತ್ತು ನಮ್ದಾ ಬಿಗಿದು, ಅದರಲ್ಲಿ 350 ಕೆ.ಜಿ.ತೂಕದ ಕಬ್ಬಿಣದ ತೊಟ್ಟಿಲನ್ನು ಇರಿಸಿ ಮರಳು ಮೂಟೆಗಳನ್ನು ಇಡಲಾಯಿತು. ಬಳಿಕ ಮೂರು ಆನೆಗಳನ್ನು ಅರಮನೆ ಬಳಿಯ ಅಂಬಾರಿ ಕಟ್ಟುವ ಜಾಗಕ್ಕೆ ಕರೆದೊಯ್ದು ತಾಲೀಮು ಆರಂಭಿಸಲಾಯಿತು.
ಸುಮಾರು 600 ಕೆ.ಜಿ. ಭಾರ ಹೊತ್ತು ಅರಮನೆಯಿಂದ ರಾಜಮಾರ್ಗದಲ್ಲಿ ಹೊರಟ ಕ್ಯಾಪ್ಟನ್ ಅಭಿಮನ್ಯುವನ್ನು ವಿಜಯ, ಧನಂಜಯ, ವರಲಕ್ಷ್ಮೀ, ಕಂಜನ್, ಭೀಮ, ಮಹೇಂದ್ರ, ಗೋಪಿ ಹಾಗೂ ಅರ್ಜುನ ಆನೆಗಳು ಹಿಂಬಾಲಿಸಿದವು. ವಿಜಯದಶಮಿಯಂದು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವ ಅಭಿಮನ್ಯ, ಯಾವುದೇ ಸಮಸ್ಯೆ ಇಲ್ಲದೆ ನಿರಾಯಾಸವಾಗಿ ಈಗ ಸಾಗುವ ಮೂಲಕ ತಾನು ಸಮರ್ಥ್ಯ ಎಂದು ನಿರೂಪಿಸಿದ.
ನಗರದಕ್ಕೆ ಒಗ್ಗಿದ ಕಂಜನ್:
ಇದೇ ಪ್ರಥಮ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ‘ಕಂಜನ್’ ಆನೆ ನಗರ ಪರಿಸರಕ್ಕೆ ನಿಧಾನವಾಗಿ ಹೊಂದಿಕೊಳ್ಳಲು ಆರಂಭಿಸಿದ್ದಾನೆ. ಪ್ರಥಮ ಬಾರಿಗೆ ಅರಮನೆಗೆ ಬಂದಾಗ ಆತಂಕದಲ್ಲಿಯೇ ಇದ್ದ ಕಂಜನ್, ಪರಿಸರಕ್ಕೆ ಹೊಂದಿಕೊಂಡಿದ್ದಾನೆ. ಇನ್ನಿತರ ಆನೆಗಳ ಜತೆಗೆ ಯಾವುದೇ ಭಯ, ಆತಂಕವಿಲ್ಲದೆ ತಾಲೀಮಿನಲ್ಲಿ ಭಾಗವಹಿಸುತ್ತಿದೆ. ತಾಲೀಮಿನ ವೇಳೆ ಪಕ್ಕದಲ್ಲಿ ವಾಹನಗಳು ಸಾಗಿದರೂ, ಶಬ್ದವಾದರೂ ಧೈರ್ಯದಿಂದ ಹೆಜ್ಜೆ ಇಡುವ ಮೂಲಕ ಅಧಿಕಾರಿಗಳಲ್ಲಿ ಭರವಸೆ ಮೂಡಿಸಿದ್ದಾನೆ. ರಾಜಮಾರ್ಗದಲ್ಲಿ ಗಜಪಡೆ ತಾಲೀಮು ನಡೆಸುವಾಗ ರಸ್ತೆ ಬದಿಯಲ್ಲಿ ಹೂ, ಹಣ್ಣು ವ್ಯಾಪಾರಿಗಳು ಆನೆಗಳನ್ನು ಕಂಡು ಕೈಮುಗಿದು, ತಮ್ಮಲ್ಲಿರುವ ಹೂ, ಹಣ್ಣುಗಳನ್ನು ಆನೆಗಳಿಗೆ ನೀಡಿದರು.
ಡಿಸಿಎಫ್ ಮಾಲತಿಪ್ರಿಯಾ ಮಾತನಾಡಿ, ಆನೆಗಳಿಗೆ ಭಾರದ ತಾಲೀಮು ಆರಂಭಿಸಲಾಗುತ್ತಿದ್ದು, ಅಭಿಮನ್ಯುವಿಗೆ ಮೊದಲು 350 ಕೆ.ಜಿ ಮರಳಿನ ಮೂಟೆ ಇಟ್ಟು ತಾಲೀಮು ನಡೆಸಲಾಗುತ್ತಿದೆ. ಮರಳು ಮೂಟೆ 350 ಕೆ.ಜಿ, ನಮ್ದಾ, ಗಾದಿ, ಹಗ್ಗ ಎಲ್ಲ ಸೇರಿ 600 ಕೆಜಿ ತೂಕವಿರಿಸಿ ಆನೆಗಳು ನಡೆಯುತ್ತಿವೆ. ಬಳಿಕ ಹಂತ ಹಂತವಾಗಿ ಭಾರ ಹೆಚ್ಚಿಸಿ ಒಟ್ಟು 750 ಕೆ.ಜಿ ಭಾರದ ವರೆಗೆ ತಾಲೀಮು ಮಾಡುತ್ತೇವೆ. ಅರ್ಜುನ ಬಿಟ್ಟು 5 ಗಂಡಾನೆಗಳಿಗೆ ಭಾರ ಹೊರಿಸುವ ತಾಲೀಮನ್ನು ಒಂದಾದ ಮೇಲೆ ಒಂದರಂತೆ ಐದು ದಿನ ನಡೆಸಲಾಗುತ್ತದೆ ಎಂದು ಹೇಳಿದರು.
ಸೆಪ್ಟೆಂಬರ್ ಕೊನೆಯ ವಾರ ಎರಡನೇ ಹಂತದಲ್ಲಿ ಐದು ಆನೆಗಳನ್ನು ಕರೆತರಲಾಗುತ್ತದೆ. 2ನೇ ಹಂತದಲ್ಲಿ ರೋಹಿತ, ಲಕ್ಷ್ಮೀ ಹಾಗೂ ಹಿರಣ್ಯಾ ಎಂಬ ಹೊಸ ಆನೆಗಳು ತಂಡವನ್ನು ಸೇರಿಕೊಳ್ಳಲಿವೆ. ದಸರೆ ಜಂಬೂಸವಾರಿಗೆ ಇಲಾಖೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಆನೆಗಳು ಉತ್ತಮ ಪ್ರದರ್ಶನ ನೀಡುತ್ತಿವೆ. ಆನೆಗಳ ತೂಕ ಹೆಚ್ಚಿಸಲು ವಿಶೇಷ ಆಹಾರ ನೀಡಿ ಆರೈಕೆ ಮಾಡಲಾಗುತ್ತಿದೆ. ಮೊದಲ ಬಾರಿಗೆ ಕರೆತಂದಿರುವ ಕಂಜನ್ ಆನೆ ನಗರ ವಾತಾವರಣಕ್ಕೆ ಒಗ್ಗಿಕೊಂಡಿದೆ. ಬರುವ ಹೊಸ ಆನೆಗಳು ನಗರದ ವಾತಾವರಣಕ್ಕೆ ಒಗ್ಗಿಕೊಳ್ಳುವ ವಿಶ್ವಾಸವಿದೆ ಎಂದರು.