

ಯಳಂದೂರು : ಮನೆಯ ಬಚ್ಚಲು, ಪಾತ್ರೆ, ಬಟ್ಟೆ ಒಗೆಯುವ ನೀರು, ಮನೆಯಿಂದ ಬರುವ ಕಪ್ಪು ನೀರನ್ನು ಚರಂಡಿ ಮೂಲಕ ಕಾಲುವೆಯಲ್ಲಿ ಹರಿಸಿ ಈ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಇದನ್ನು ಉದ್ಯಾನ, ಜಮೀನುಗಳು, ಮನೆಯಲ್ಲಿನ ಶೌಚಗೃಹದ ಪ್ಲಶ್ ಸೇರಿದಂತೆ ಇತರ ಕಡೆ ಬಳಸುವ ಬೂದು ನೀರು ನಿರ್ವಹಣೆ ಘಟಕವನ್ನು ತಾಲೂಕಿನ ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ವಚ್ಛ ಭಾರತ್ ಮಿಷನ್ ಯೋಜನೆಯ ವತಿಯಿಂದ 2023-24ನೇ ಸಾಲಿನ ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ಅಂಬಳೆ ಪಾಲದಿಂದ ಅಂಬಳೆ ಗ್ರಾಮಕ್ಕೆ ತೆರಳುವ ರಸ್ತೆಯ ಬಳಿ ಸುವರ್ಣಾವತಿ ನದಿ ದಡದಲ್ಲಿ ಕಾಲುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 3 ಕಾಮಗಾರಿಗಳು ನಡೆಯುತ್ತಿವೆ. ಗ್ರಾಮದ ಬಸವಣ್ಣನ ಜಮೀನಿನಿಂದ ರಾಘವಯ್ಯ ಅವರ ಜಮೀನಿನವರೆಗೆ 4.96 ಲಕ್ಷ ರೂ. ವೆಚ್ಚದಲ್ಲಿ, ರಾಘವಯ್ಯ ಜಮೀನಿನಿಂದ ಸುವರ್ಣಾವತಿ ನದಿಯವರೆಗೆ 4.96 ಲಕ್ಷ ರೂ. ಹಾಗೂ ನಾಗರಾಜು ಅವರ ಜಮೀನಿನಿಂದ ಬಸವಣ್ಣ ಅವರ ಜಮೀನಿನವರೆಗೆ 4.96 ಲಕ್ಷ ರೂ. ಸೇರಿದಂತೆ ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ 150 ಮೀಟರ್‌ಗೂ ಹೆಚ್ಚಿನ ಬೂದು ನೀರು ನಿರ್ವಹಣೆ ಘಟಕ, ಕಾಲುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.
ನೀರಿನ ಮರುಬಳಕೆ ಬಗ್ಗೆ ಜಾಗೃತಿ ಮೂಡಿಸಲು ಕ್ರಮ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀರಿನ ಮಿತ ಬಳಕೆ ಹಾಗೂ ನೀರಿನ ಮಹತ್ವ, ಮಳೆ ನೀರಿನ ಕೊಯ್ಲು ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಅನೇಕ ಯೋಜನೆಗಳನ್ನು ರೂಪಿಸಿವೆ. ಇದರೊಂದಿಗೆ ನೀರನ್ನು ಮರುಬಳಕೆ ಮಾಡಿಕೊಳ್ಳಲು ಇರುವ ತಂತ್ರಜ್ಞಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬೂದು ನೀರು ನಿರ್ವಹಣೆ ಘಟಕ, ಕಾಲುವೆ ನಿರ್ಮಿಸಲಾಗುತ್ತಿದೆ. ಇದರಿಂದ ತಾಜಾ ನೀರಿನ ಬಳಕೆ ಕಡಿಮೆ ಮಾಡಬಹುದು. ಮೊದಲಿಗೆ ಕಾಲುವೆ ತೋಡಿ ಇದರ ಅಕ್ಕಪಕ್ಕ ಕಲ್ಲನ್ನು ಹಾಕಿ, ಇದರ ತಳ ಭಾಗದಲ್ಲಿ ಸಣ್ಣ ಹಾಗೂ ದಪ್ಪ ಕಲ್ಲುಗಳನ್ನು ಹಾಕಲಾಗುತ್ತದೆ. ಇದರ ಮಧ್ಯ ರಂಧ್ರಗಳಿರುವ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಕಲುಷಿತ ನೀರು ಈ ಕಾಲುವೆಯಲ್ಲಿ ಹರಿಯುವಾಗ ಹಂತಹಂತವಾಗಿ ಇದರಲ್ಲಿರುವ ಪ್ಲಾಸ್ಟಿಕ್, ಕಸ ಕಡ್ಡಿ, ಇತರ ತ್ಯಾಜ್ಯ ಒಂದೆಡೆ ಶೇಖರಣೆಯಾಗಿ ನೀರು ಶುದ್ಧೀಕರಣಗೊಳ್ಳುತ್ತದೆ. ನಂತರ ಕೊನೆಯಲ್ಲಿ ಇದಕ್ಕೆ ಕಬ್ಬಿಣದ ಮೆಷ್‌ನಿಂದ ಮಾಡಿದ ಜಾಲರಿ ಹಾಕಿ ಇದರೊಳಗೆ ಕಲ್ಲುಗಳನ್ನು ತುಂಬಲಾಗುತ್ತದೆ. ಇಲ್ಲಿ ಸಂಪೂರ್ಣವಾಗಿ ನೀರು ಶುದ್ಧಿಕರಣಗೊಂಡ ಇಲ್ಲಿಂದ ನೀರು ಹೊರಕ್ಕೆ ಹೋಗುವಾಗಿ ತಿಳಿಯಾಗುತ್ತದೆ. ಈ ನೀರನ್ನು ನೀರಾವರಿ ಉದ್ದೇಶಕ್ಕೆ, ಜಮೀನುಗಳಿಗೆ, ಉದ್ಯಾನವನಗಳ ನಿರ್ವಹಣೆಗೆ, ಶೌಚಗೃಹದ ಫ್ಲಶ್‌ಗಳಿಗೆ ಇತರ ಕುಡಿಯದ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬಹುದು.
ಮಾದರಿ ಮಾಡುವತ್ತ ಪಂಚಾಯಿತಿ ಹೆಜ್ಜೆ ತಾಲೂಕಿನ ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿ ಭರದಿಂದ ಸಾಗಿದೆ. ಇದನ್ನು ಇತರರಿಗೆ ಮಾದರಿ ಮಾಡುವ ನಿಟ್ಟಿನಲ್ಲಿ ಇಲ್ಲಿನ ಅಧ್ಯಕ್ಷ ಎಲ್.ನವೀನ್, ಪಿಡಿಒ ಸಿ.ಎನ್.ಕಾವ್ಯಾ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು ಹಾಗೂ ಪಂಚಾಯತ್ ರಾಜ್ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಸಿಬ್ಬಂದಿ ಸಹಕಾರದಿಂದ ಕಾಮಗಾರಿಯನ್ನು ಮಾಡಲಾಗುತ್ತಿದೆ. ಅಲ್ಲದೆ ಇದಕ್ಕೆ ಚಿತ್ತಾಕರ್ಷಕ ಬಣ್ಣಗಳನ್ನು ಬಳಿದಿರುವುದರಿಂದ ಇದು ಸಾರ್ವಜನಿಕರಿಗೆ ಗೋಚರಿಸುತ್ತದೆ.
ಮನೆಯಲ್ಲಿ ಬೂದು ನೀರನ್ನು ಮರುಬಳಕೆ ಮಾಡುವುದರಿಂದ ನೀರಿನ ಬಿಲ್ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಸೆಪ್ಟಿಕ್ ಟ್ಯಾಂಕ್‌ಗಳ ಮೇಲಿನ ಹೊರೆ ಕಡಿಮೆ ಮಾಡಬಹುದು. ಜಲಸಂಪನ್ಮೂಲಗಳನ್ನು ಉಳಿಸುವ ನೀರನ ಸಂರಕ್ಷಣೆ ಮಾಡುವ ಉದ್ದೇಶದಿಂದ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಕಾಮಗಾರಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಚಾಲನೆ ನೀಡಿದ್ದಾರೆ. ನಿಮ್ಮ ಪಂಚಾಯಿತಿ ಈ ಕೆಲಸದಲ್ಲಿ ಮಾದರಿಯಾಗಲಿ ಎಂದಿದ್ದಾರೆ. ಹಾಗಾಗಿ ಹೆಚ್ಚು ಗಮನ ವಹಿಸಿ ಗುಣಮಟ್ಟದಿಂದ ಈ ಕಾಮಗಾರಿಯನ್ನು ಮಾಡಲಾಗುತ್ತಿದೆ. ಎಲ್. ನವೀನ್, ಗ್ರಾಪಂ ಅಧ್ಯಕ್ಷ ಅಂಬಳೆ