

ಚಿಕ್ಕೋಡಿ, ಬೆಳಗಾವಿ: ಲಕ್ಷಾಂತರ ಅಂಧ ವಿದ್ಯಾರ್ಥಿಗಳ ಬಾಳಿನಲ್ಲಿ ಸಂಗೀತ ಶಿಕ್ಷಣ ನೀಡಿ ಬೆಳಕು ನೀಡಿದವರು ಹಾನಗಲ್ ಕುಮಾರಸ್ವಾಮಿಗಳು ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಡಾ. ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಸಿಎಲ್‌ಇ ಸಂಸ್ಥೆಯ ಸಿಎಸ್‌ಎಸ್ ಪ್ರೌಢ ಶಾಲೆಯ ಆವರಣದಲ್ಲಿ ಹಾನಗಲ್ ಕುಮಾರಸ್ವಾಮಿ ಅವರ 155ನೇ ಜಯಂತಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕುಮಾರ ಶಿವಯೋಗಿಗಳ ಜೀವನ ದರ್ಶನ ಹಾಗೂ ಪ್ರವಚನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಗದಗ-ಡಂಬಳ ಸಂಸ್ಥಾನ ಮಠದ ಶ್ರೀ ಎಡೆಯೂರ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ ಮಾತನಾಡಿ, ಇಂದಿನ ಯುವಕರಲ್ಲಿ ಧಾರ್ಮಿಕ ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ನಿಡಸೋಸಿಯ ಸಿದ್ದ ಸಂಸ್ಥಾನ ಮಠದ ಪಂಚಮಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಶರಣರ ವಚನಗಳು ಜನರ ಸಾಮಾಜಿಕ ಬದುಕಿಗೆ ದಾರಿದೀಪವಾಗಿವೆ ಎಂದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಹಾನಗಲ್ ಸ್ವಾಮಿಗಳು, ಇಂದಿನ ಮಠಾಧೀಶರಿಗೆ ಮತ್ತು ರಾಜಕಾರಣಿಗಳಿಗೆ ಹೇಗಿರಬೇಕು ಎಂದು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದರು. ರೋಹಿಣಿ ಮಿರ್ಜಿ ಶ್ರೀಗಳ ಕುರಿತಾದ ಪುಸ್ತಕ ಬಿಡುಗಡೆ ಮಾಡಿದರು. ಸಿದ್ದೇಶ್ವರ ವಿರಕ್ತಮಠದ ಶಿವಾನಂದ ಸ್ವಾಮಿ, ಸಿದ್ದ ಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ, ಅಭಿನವ ಸಿದ್ಧಾರೂಢ ಸ್ವಾಮಿ, ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ, ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ, ದರ್ಶನ ಪೂಜಾರಿ ಇತರರಿದ್ದರು.