

ಚಾಮರಾಜನಗರ: ಅಂಗವಿಕಲೆಗೆ ಹಲವು ವರ್ಷಗಳಿಂದ ಆಧಾರ್ ಕಾರ್ಡ್ ಪಡೆಯಲು ತೊಡಕಾಗಿದ್ದ ಸಮಸ್ಯೆಯನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಪರಿಹರಿಸಿ ಆಧಾರ್ ಕಾರ್ಡ್ ವಿತರಿಸಿದ್ದಾರೆ.
ತಾಲೂಕಿನ ತಮ್ಮಡಹಳ್ಳಿ ಗ್ರಾಮದ ಭಾಗ್ಯಾ ಅಂಧರಾಗಿದ್ದು, ಆಧಾರ್ ಕಾರ್ಡ್ ಪಡೆಯುವ ಸಲುವಾಗಿ ನಡೆಸುವ ಕಣ್ಣಿನ ಪೂರ್ವ ತಪಾಸಣೆ ಸಂದರ್ಭದಲ್ಲಿ ಕಣ್ಣಿನ ತೊಂದರೆಯಿಂದ ಏರಿಳಿತವಾಗುತ್ತಿದ್ದರಿಂದ ಇವರಿಗೆ ಕಾರ್ಡ್ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಕಳೆದ 2024ರ ಡಿ.19ರಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಅಂಗವಿಕಲರ ಕುಂದುಕೊರತೆ ಸಭೆಯಲ್ಲಿ ಭಾಗ್ಯಾ ಅವರು ಆಧಾರ್ ನೋಂದಣಿಯಾಗದಿರುವ ಸಮಸ್ಯೆ ನಿವೇದಿಸಿಕೊಂಡಿದ್ದರು. ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಭಾಗ್ಯಾ ಅವರಿಗೆ ಆಧಾರ್ ನೋಂದಣಿಗೆ ವಿಶೇಷ ಕ್ರಮ ವಹಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇವರ ಆಧಾರ್ ನೋಂದಣಿಗೆ ಇದ್ದ ತೊಂದರೆಗಳನ್ನು ವಿವರವಾಗಿ ಪಟ್ಟಿ ಮಾಡಿ ಇ-ಆಡಳಿತ ಕೇಂದ್ರಕ್ಕೆ ಕಳುಹಿಸಿ ಆಧಾರ್ ಕಾರ್ಡ್ ಪಡೆಯಲು ಪತ್ರ ಕಳುಹಿಸಲಾಗಿತ್ತು. ತೀವ್ರತರವಾದ ಅಂಗವಿಕಲರಿಗೆ ಯು.ಡಿ.ಐ.ಡಿ. ಕಾರ್ಡ್ ಮಾಡಿಸುವಂತೆಯೂ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು.
ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜಿಲ್ಲಾಮಟ್ಟದ ಆಧಾರ್ ಕೇಂದ್ರ ಅಧಿಕಾರಿಗಳು ಸತತವಾಗಿ ಪ್ರಯತ್ನಿಸಿ ಭಾಗ್ಯಾ ಅವರಿಗೆ ಆಧಾರ್ ನೋಂದಣಿಗೆ ಇದ್ದ ತೊಡಕುಗಳನ್ನು ಪರಿಹರಿಸಿದ್ದಾರೆ. ಕೊನೆಗೂ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ವಿಶೇಷ ಕಾಳಜಿಯಿಂದ ಭಾಗ್ಯಾ ಅವರಿಗೆ ಆಧಾರ್ ಕಾರ್ಡ್ ದೊರೆತಿದೆ. ಪದವಿ ಪೂರ್ಣಗೊಳಿಸಿರುವ ನನಗೆ ಆಧಾರ್ ಇಲ್ಲದೆ ಇದ್ದರಿಂದ ಮುಂದಿನ ಭವಿಷ್ಯಕ್ಕೆ ತೊಂದರೆಯಾಗುತ್ತಿತ್ತು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ವಿಶೇಷ ಆಸಕ್ತಿಯಿಂದ ನನಗೆ ಆಧಾರ್ ಕಾರ್ಡ್ ಬಂದಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಹು ವರ್ಷಗಳ ಸಮಸ್ಯೆ ಪರಿಹಾರವಾಗಿದ್ದು ಮುಂದಿನ ಬದುಕಿಗೆ ಉತ್ಸಾಹ ದೊರೆತಿದೆ ಎಂದು ಭಾಗ್ಯಾ ಹರ್ಷ ವ್ಯಕ್ತಪಡಿಸಿದ್ದಾರೆ. ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಂಧ ಯುವತಿ ಭಾಗ್ಯಾ ಅವರಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಆಧಾರ್ ಕಾರ್ಡ್ ಪ್ರತಿಯನ್ನು ವಿತರಣೆ ಮಾಡಿದರು.