ಅಂತ್ಯಕ್ರಿಯೆ ನೆರವೇರಿಸಿದ ಪೌರಕಾರ್ವಿುಕರು !

20mnd1
Published on

ಮುಂಡಗೋಡ: ಹೃದಯಾಘಾತದಿಂದ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂತ್ಯ ಸಂಸ್ಕಾರವನ್ನು ಪೌರ ಕಾರ್ವಿುಕರೇ ನೆರವೇರಿಸಿದ ಘಟನೆ ಪಟ್ಟಣದ ಗಾಂಧಿನಗರದಲ್ಲಿ ಭಾನುವಾರ ನಡೆದಿದೆ. ಕೋವಿಡ್-19 ಭಯದಿಂದ ಅಕ್ಕ- ಪಕ್ಕದವರಾರೂ ಶವ ಸಂಸ್ಕಾರಕ್ಕೆ ಮುಂದಾಗಲಿಲ್ಲ. ಹೀಗಾಗಿ ಪೌರ ಕಾರ್ವಿುಕರು ಪಿಪಿಇ ಕಿಟ್ ಧರಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಮನೋಹರ ವೆರ್ಣೆಕರ (42) ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ. ಇವರು ಮೂಲತಃ ಬೆಳಗಾವಿಯವರು. ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ವಾಸವಿದ್ದರು. ಪತ್ನಿ ಭೇಟಿಯಾಗಲು ಜು. 16ರಂದು ಪಟ್ಟಣದ ಗಾಂಧಿನಗರಕ್ಕೆ ಬಂದಿದ್ದರು. ಬರುವ ಮುನ್ನ ಕಾರವಾರದ ಸರ್ಕಾರಿ ಆಸ್ಪತ್ರೆಯಲ್ಲಿ ಜ್ವರ ತಪಾಸಣೆ ಮಾಡಿಸಿದ್ದರು. ಬಳಿಕ ಇಲ್ಲಿನ ತಾಲೂಕು ಆಸ್ಪತ್ರೆಗೆ ತೆರಳಿ ಕಾರವಾರದಲ್ಲಿ ಪರೀಕ್ಷೆ ಮಾಡಿಸಿದ ಚೀಟಿಯನ್ನು ತೋರಿಸಿ ಮನೆಗೆ ತೆರಳಿದ್ದರು. ಜು. 18ರಂದು ಮನೆಯಲ್ಲಿ ಮಲಗಿದ್ದಾಗ ರಾತ್ರಿ 3ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷೆ ನಡೆಸಿ ವ್ಯಕ್ತಿಯು ಹೃದಯಾಘಾತದಿಂದ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಮೃತನ ಹೆಂಡತಿ ಅಂಗವಿಕಲೆಯಾಗಿದ್ದು, ಅತ್ತೆ- ಮಾವನವರಿಗೆ ವಯಸ್ಸಾಗಿದೆ. ಸಂಬಂಧಿಕರು, ಸ್ಥಳೀಯರು ಕೂಡ ಯಾರೂ ಬರುವುದಿಲ್ಲ. ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಿ ಎಂದು ಮೃತನ ಕುಟುಂಬದವರು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ಸೇರಿ ಅಂತ್ಯ ಸಂಸ್ಕಾರ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net