

ಬೆಳಗಾವಿ: ಮಹಾಮಾರಿ ಕರೊನಾ ವೈರಸ್ ಅಟ್ಟಹಾಸಕ್ಕೆ ತುತ್ತಾಗಿ ದಿನವೂ ಲೆಕ್ಕವಿಲ್ಲದಷ್ಟು ಜನರು ಮೃತಪಡುತ್ತಿದ್ದಾರೆ. ಮನುಕುಲಕ್ಕೆ ಮಾರಕವಾಗಿ ಕಾಡುತ್ತಿರುವ ಈ ಸೋಂಕು, ಮಾನವೀಯ ಮೌಲ್ಯಗಳನ್ನೇ ನಾಶ ಮಾಡುತ್ತಿದೆ. ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಬಂಧುಗಳು ಬರುತ್ತಿಲ್ಲ. ಹೀಗಾಗಿ ಅಂತ್ಯ ಸಂಸ್ಕಾರಕ್ಕೆ ಪರದಾಡುವ ಆ ಕುಟುಂಬದ ಸದಸ್ಯರಿಗೆ ಬಜರಂಗ ದಳ ಹಾಗೂ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಆಸರೆಯಾಗಿದ್ದಾರೆ.
ಇಷ್ಟು ದಿನಗಳ ಕಾಲ ದೇಶ ಹಾಗೂ ಹಿಂದುತ್ವದ ವಿಚಾರಗಳಲ್ಲಷ್ಟೇ ಈ ಸಂಘಟನೆ ಗಮನ ಸೆಳೆಯುತ್ತಿತ್ತು. ಆದರೆ, ಬೆಳಗಾವಿಯಲ್ಲಿ ಈ ಸಂಘಟನೆ ಕಾರ್ಯಕರ್ತರು ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದಾರೆ. ಯಾವುದೇ ಜಾತಿ, ಧರ್ಮದವರು ಮೃತಪಟ್ಟರೂ, ಅವರ ಸಂಪ್ರದಾಯದಂತೆಯೇ ಉಚಿತವಾಗಿ ಅಂತ್ಯಕ್ರಿಯೆ ಮಾಡುವ ಮಾನವೀಯ ಕೈಂಕರ್ಯದಲ್ಲಿ ನಿರತರಾಗಿದ್ದಾರೆ.
300ಕ್ಕೂ ಅಧಿಕ ಅಂತ್ಯಕ್ರಿಯೆ: ಕರೊನಾ 2ನೇ ಅಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಬಂಧುಗಳು ತೀರಿದಾಗ ಶವ ಹೊರಲು ನಾಲ್ಕು ಜನರು ಹೆಗಲು ಕೊಡಲು ಬೇಕು. ಕರೊನಾ ಆತಂಕದಿಂದ ಯಾರೂ ಬರುತ್ತಿಲ್ಲ. ಆದರೆ, ಬಜರಂಗಿಗಳು ಕರೊನಾದಿಂದ ಮೃತಪಟ್ಟವರ ಶವಸಂಸ್ಕಾರ ಮಾಡುವ ಮೂಲಕ ಆ ಕುಟುಂಬದ ‘ನಿಜವಾದ ಸಂಬಂಧಿಕರು’ ಎಂಬಂತಾಗಿದೆ. 150ಕ್ಕೂ ಅಧಿಕ ಕಾರ್ಯಕರ್ತರು ಈ ಕಾರ್ಯದಲ್ಲಿ ತೊಡಗಿದ್ದು, ಈವರೆಗೆ ಅನ್ಯ ಕಾರಣದಿಂದ ಮೃತಪಟ್ಟವರೂ ಸೇರಿ 320ಕ್ಕೂ ಹೆಚ್ಚು ಜನರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ‘ಜಾತಿಗಿಂತ ಮಾನವೀಯತೆ ಮುಖ್ಯ’ ಎಂಬ ಸಂದೇಶ ಸಾರುತ್ತಿದ್ದಾರೆ.
ಐದು ಆಂಬುಲೆನ್ಸ್ ಬಳಕೆ: ಐದು ಆಂಬುಲೆನ್ಸ್‌ಅನ್ನು ಈ ಕಾರ್ಯಕ್ಕೆ ಬಳಸುತ್ತಿರುವ ಸಂಘಟನೆ, ಸೋಂಕಿತರನ್ನು ಉಚಿತವಾಗಿಯೇ ಆಸ್ಪತ್ರೆಗೆ ಸಾಗಿಸುತ್ತಿದೆ. ಚಿಕಿತ್ಸೆ ಪಡೆದು ಗುಣಮುಖರಾದವರನ್ನು ಆಸ್ಪತ್ರೆಯಿಂದ ಮನೆಗೆ ಬಿಡುತ್ತಿದ್ದಾರೆ. ಕರೆ ನಿಮ್ಮದು, ಸೌಲಭ್ಯ ನಮ್ಮದು: ಹಗಲು-ರಾತ್ರಿ ಯಾವುದೇ ವೇಳೆಯಲ್ಲಾದರೂ ಅಂತ್ಯಕ್ರಿಯೆ ನೆರವೇರಿಸಲು ಕಾರ್ಯಕರ್ತರು ಸಿದ್ಧರಾಗಿಯೇ ಇರುತ್ತಾರೆ. ‘ಕರೆ ನಿಮ್ಮದು, ಸೌಲಭ್ಯ ನಮ್ಮದು’ ಎಂಬ ೋಷಣೆಯೊಂದಿಗೆ ಸೋಂಕಿತರ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಆಂಬುಲೆನ್ಸ್, ಶವಸಂಸ್ಕಾರಕ್ಕಾಗಿ ಜನರು ಮೊ.ಸಂ. 9740823905, 8904500451ಗೆ ಸಂಪರ್ಕಿಸಬಹುದು.
ಕರೊನಾ ಮೊದಲ ಅಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ನೆರವಾಗಿದ್ದ ಬೆಳಗಾವಿಯ ‘ಅಂಜುಮನ್-ಇ-ಇಸ್ಲಾಂ’ ಸಂಸ್ಥೆ ಈ ವರ್ಷವೂ ತನ್ನ ಸೇವೆ ಮುಂದುವರಿಸಿದೆ. 30 ಸ್ವಯಂ ಸೇವಕರು ನಿಸ್ವಾರ್ಥ ಮನೋಭಾವದಿಂದ ಕೋವಿಡ್ ಹಾಗೂ ಅನಾರೋಗ್ಯದಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ. 2021ರ ಏ. 1ರಿಂದ ಈವರೆಗೆ 369 ಜನರ ಅಂತ್ಯ ಸಂಸ್ಕಾರ ಮಾಡಿದ್ದಾರೆ. ‘ಮೃತಪಟ್ಟವರ ಅಂತ್ಯಕ್ರಿಯೆ ವೇಳೆ ಕಾರ್ಯಕರ್ತರು ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಧರಿಸಿ ಅಗತ್ಯ ಸುರಕ್ಷತಾ ಕ್ರಮ ಅನುಸರಿಸುತ್ತಿದ್ದಾರೆ. ಈ ಮಧ್ಯೆ, ಕೆಲವರು ಸೋಂಕಿಗೆ ಒಳಗಾಗಿದ್ದಾರೆ. ಚಿಕಿತ್ಸೆ ಪಡೆದು ಗುಣವಾದ ಬಳಿಕ, ಇನ್ನಷ್ಟು ಉತ್ಸಾಹದಿಂದ ಈ ಮಾನವೀಯ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಂತ್ಯಸಂಸ್ಕಾರ ನೆರವೇರಿಸುವುದಿದ್ದರೆ ಮೊ.ಸಂ.9611852676 ಸಂಪರ್ಕಿಸಬಹುದು’ ಎಂದು ಅಂಜುಮನ್-ಇ-ಇಸ್ಲಾಂ ಸಂಸ್ಥೆ ನಿರ್ದೇಶಕ ಬಾಬುಲಾಲ ಮುಜಾವರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಕೋವಿಡ್ ಅಥವಾ ಅನಾರೋಗ್ಯದಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಕುಟುಂಬಸ್ಥರಿಗೆ ಅನುಕೂಲವಾಗಲೆಂದು ಈ ಸೇವೆ ಮಾಡುತ್ತಿದ್ದೇವೆ. ಸಾರ್ವಜನಿಕರು ನೀಡುತ್ತಿರುವ ದೇಣಿಗೆ ಹಣದಲ್ಲಿ ಈ ಕೈಂಕರ್ಯ ಕೈಗೊಳ್ಳುತ್ತಿದ್ದೇವೆ. ಅಂತ್ಯ ಸಂಸ್ಕಾರವೂ ಸಹ ಭಾವನಾತ್ಮಕ ಕ್ರಿಯೆ. ಆದರೆ, ಈ ಪ್ರಕ್ರಿಯೆಗೂ ಸಂಬಂಧಿಗಳು ಬರಲಾರದಂತಹ ಸನ್ನಿವೇಶ ನಿರ್ಮಾಣವಾಗಿರುವುದು ನಿಜಕ್ಕೂ ವಿಪರ್ಯಾಸ. ಈ ಸೇವೆ ಮುಂದುವರಿಸುತ್ತೇವೆ.| ಕೃಷ್ಣ ಭಟ್ ಸಹ ಕೋಶಾಧ್ಯಕ್ಷ, ವಿಶ್ವ ಹಿಂದು ಪರಿಷತ್, ಬೆಳಗಾವಿ
| ಇಮಾಮಹುಸೇನ್ ಗೂಡುನವರ ಬೆಳಗಾವಿ