ಅಂತ್ಯ ಕಂಡ ಬೆಳೆಗಾರರ ಧರಣಿ

2 skpp 1
ಮಧ್ಯರಾತ್ರಿ ಧರಣಿ ನಿರತರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭೇಟಿ ಮಾಡಿ ಚರ್ಚೆ ನಡೆಸಿದರು.
Published on

ಸಕಲೇಶಪುರ: ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾಡಾನೆ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮೃತದೇಹದೊಂದಿಗೆ ಆಹೋರಾತ್ರಿ ನಡೆಸುತ್ತಿದ್ದ ಧರಣಿ ಮಂಗಳವಾರ ಮಧ್ಯರಾತ್ರಿ ಅಂತ್ಯ ಕಂಡಿದೆ.

ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಮನುಕುಮಾರ್ ಮೃತದೇಹದೊಂದಿಗೆ ಹಾಸನ ಜಿಲ್ಲಾ ಬೆಳೆಗಾರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿದ ಸಾರ್ವಜನಿಕರು, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟುಹಿಡಿದಿದ್ದರು. ಆದರೆ, ಕನ್ನಡ ರಾಜ್ಯೋತ್ಸವಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಬಂದಿದ್ದ ಉಸ್ತುವಾರಿ ಸಚಿವರು ಕಾಡಾನೆ ದಾಳಿಯಿಂದ ವ್ಯಕ್ತಿ ಮೃತಪಟ್ಟ ವಿಚಾರ ತಿಳಿದರೂ ಬೆಂಗಳೂರಿಗೆ ತೆರಳಿದ್ದಾರೆ ಎಂಬ ವಿಚಾರ ಪ್ರತಿಭಟನಾಕಾರರ ರೋಷಕ್ಕೆ ಕಾರಣವಾಗಿತ್ತು. ಈ ವಿಚಾರ ಆಹೋರಾತ್ರಿ ಧರಣಿಗೂ ಕಾರಣವಾಗಿತ್ತು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಾಲೂಕು ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ 11 ಗಂಟೆ ವೇಳೆಗೆ ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರವಾಣಿ ಕರೆ ಮಾಡಿ ಪ್ರತಿಭಟನಾಕಾರರ ಜತೆ ಮಾತನಾಡಿಸಿದರು. ಇನ್ನೆರಡು ದಿನಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳನ್ನು ತಾಲೂಕಿಗೆ ಕಳುಹಿಸುವ ಮೂಲಕ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು, ರಾಜ್ಯ ಸರ್ಕಾರ ನಿಮ್ಮೊಂದಿಗಿದೆ. ತಕ್ಷಣವೇ ಉಸ್ತುವಾರಿ ಸಚಿವರನ್ನು ಸ್ಥಳಕ್ಕೆ ಕಳುಹಿಸಲಾಗುವುದೆಂದು ಸಿಎಂ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಧರಣಿಯನ್ನು ವಾಪಸ್ ಪಡೆದರು.

ಕಂದಾಯ ಸಚಿವ ಆರ್.ಅಶೋಕ್ ಅವರೂ ದೂರವಾಣಿಯಲ್ಲಿ ಮಾತನಾಡಿ, ಸಮಸ್ಯೆ ಪರಿಹಾರಕ್ಕೆ ಅಗತ್ಯವಿರುವ ಮಾರ್ಗಗಳನ್ನು ಕಂಡುಹಿಡಿಯೋಣ ಎಂದು ತಿಳಿಸಿದರು.
ರಾತ್ರಿ 12 ಗಂಟೆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಿ ಎಲ್ಲ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸುವ ಭರವಸೆ ನೀಡಿದರು.

ಪಾಳು ತೋಟಗಳೇ ಕಂಟಕ: ತಾಲೂಕಿನಲ್ಲಿ ಸುಮಾರು 2100 ಹೆಕ್ಟೇರ್ ಕಾಫಿ ತೋಟ ಪಾಳು ಬಿಡಲಾಗಿದೆ ಎಂಬ ಅಂಕಿ ಸಂಖ್ಯೆಗಳಿದ್ದು, ಇದರಲ್ಲಿ ಬಹುತೇಕ ಕಾಫಿ ತೋಟಗಳ ಉದ್ಯಮಿಗಳು ತಮ್ಮ ಕಪ್ಪುಹಣವನ್ನು ಬಿಳುಪು ಮಾಡುವ ಉದ್ದೇಶದಿಂದಲೇ ಖರೀದಿಸಿ ಪಾಳು ಬಿಟ್ಟಿದ್ದಾರೆ ಎಂಬ ಅಂಶ ಅಚ್ಚರಿ ಮೂಡಿಸುತ್ತಿದೆ. ಈ ತೋಟಗಳೇ ಕಾಡಾನೆಗಳ ಪಾಲಿಗೆ ಮೆಚ್ಚಿನ ತಂಗುದಾಣಗಳಾಗಿದ್ದು ಜೀವಹಾನಿಗೂ ಕಾರಣವಾಗುತ್ತಿವೆ. ಹಳೆಕೆರೆ ಹಾಗೂ ಸುಳ್ಳಕ್ಕಿ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಗಳು ಸಹ ಪಾಳು ತೋಟದಲ್ಲಿ ಹಾದು ಹೋಗುವಾಗ ಜೀವ ಕಳೆದುಕೊಂಡರೆ. ಹೆಬ್ಬನಹಳ್ಳಿ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಗೂ ಪಾಳುತೋಟವೇ ಮಾರಣಾಂತಿಕವಾಗಿದ್ದು ಬೇಸರದ ವಿಷಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net