ಅಂತೂ ಭೀಮನಾಳಕ್ಕೆ ಬಂತು ಬಸ್

0604 KML 01
ಕಮಲಾಪುರ ತಾಲೂಕಿನ ಭೀಮನಾಳ ಗ್ರಾಮಕ್ಕೆ ಬಂದ ಬಸ್‌ಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿ ಚಾಲಕ-ನಿರ್ವಾಹಕರನ್ನು ಸನ್ಮಾನಿಸಿದರು. ಮಹಾನಂದಾ ಕುಪೇಂದ್ರ, ಬಾಬು ತುಕಾರಾಮ, ಶಿವರುದ್ರಪ್ಪ ನಿಗ್ಗುಡಗಿ, ಉಪೇಂದ್ರ ಇತರರಿದ್ದರು.
Published on

ಕಮಲಾಪುರ: ಸ್ವಾತಂತ್ರ್ಯ ಸಿಕ್ಕು ೭೬ ವರ್ಷಗಳಾದರೂ ಭೀಮನಾಳ ಗ್ರಾಮ ಬಸ್ಸನ್ನೇ ಕಂಡಿರಲಿಲ್ಲ. ಆದರೆ ವಿಜಯವಾಣಿ ಪತ್ರಿಕೆ ಗ್ರಾಮಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ ವಿಶೇಷ ವರದಿ ಬಿತ್ತರಿಸಿದ ಒಂದೇ ದಿನದಲ್ಲಿ ಸಾರಿಗೆ ಸಂಪರ್ಕ ದೊರೆತಿದ್ದು, ಹಳ್ಳಿಯಲ್ಲಿ ಸಂತಸ ಮನೆ ಮಾಡಿದೆ.

ಕಲಮೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೀಮನಾಳ ಹಾಗೂ ಭೀಮನಾಳ ತಾಂಡಾದಲ್ಲಿ ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಇನ್ನು ಗ್ರಾಮ ರಾಷ್ಟ್ರೀಯ ಹೆದ್ದಾರಿಯಿಂದ ಎರಡು ಕಿಮೀ ದೂರದಲ್ಲಿದೆ. ಆದರೆ ಒಮ್ಮೆಯೂ ಬಸ್ ಬಂದಿಲ್ಲ. ಇದರಿಂದ ನಿತ್ಯವೂ ಜನರು, ಮಕ್ಕಳು ನಡೆದುಕೊಂಡು ಮುಖ್ಯ ರಸ್ತೆಗೆ ಬಂದು ವಿವಿಧೆಡೆ ಹೋಗುತ್ತಿದ್ದರು.

ಬಸ್ ಸೇವೆ ಕಲ್ಪಿಸುವಂತೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಕೊನೆಗೆ ಹಳ್ಳಿ ಜನರ ಸಮಸ್ಯೆಗೆ ಧ್ವನಿಯಾಗಿದ್ದು ವಿಜಯವಾಣಿ. ಪತ್ರಿಕೆ ತಂಡ ಭೀಮನಾಳಕ್ಕೆ ಭೇಟಿ ನೀಡಿ ಸಮಸ್ಯೆ ಅರಿತು ಏ.೫ರ ಸಂಚಿಕೆಯಲ್ಲಿ `ಭೀಮನಾಳಕ್ಕಿಲ್ಲ ಬಸ್ ಸೇವೆ' ತಲೆಬರಹದಡಿ ವಿಶೇಷ ವರದಿ ಪ್ರಕಟಿಸಿತು. ಎಚ್ಚೆತ್ತ ಸಾರಿಗೆ ಅಧಿಕಾರಿಗಳು ಅಂದೇ ಊರಿಗೆ ಬಂದು ಜನರೊಂದಿಗೆ ಮಾತನಾಡಿದರಲ್ಲದೆ ಮರುದಿನವೇ ಬಸ್ ಕಾರ್ಯಾಚರಣೆ ಆರಂಭಿಸಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರಾದ ಮಹಾನಂದಾ ಕುಪೇಂದ್ರ, ಬಾಬು ತುಕಾರಾಮ, ಜಿಪಂ ಸಹಾಯಕ ಅಭಿಯಂತರ ಸುನೀಲ್ ಚವ್ಹಾಣ್, ಪ್ರಮುಖರಾದ ಶಿವರುದ್ರಪ್ಪ ನಿಗ್ಗುಡಗಿ, ಉಪೇಂದ್ರ, ಈಶ್ವರ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಸಂತೋಷ ಪೂಜಾರಿ, ಭೀಮಾಶಂಕರ ಪೂಜಾರಿ, ಅಜೀಮ್ ಪಟೇಲ್, ಮನ್ಸೂರ್ ಪಟೇಲ್, ರವೀಂದ್ರ ವಾಲಿ, ಸುಭಾಷಚಂದ್ರ ವಾಲಿ, ಸೀತಾರಾಮ ನಾಯಕ್, ತುಕಾರಾಮ, ಗಣಪತಿ ಚವ್ಹಾಣ್, ಹರೀಶಚಂದ್ರ ಚವ್ಹಾಣ್, ಸಂತೋಷ ಚವ್ಹಾಣ್, ದಾದಾ ಚವ್ಹಾಣ್, ಮೋಹನ್ ರಾಠೋಡ್,ದಿನೇಶ ಚವ್ಹಾಣ್, ದಯಾನಂದ ರೇಮು, ಜಯರಾಮ ಇತರರಿದ್ದರು.

ಖುಷಿ ತಂದ ರಾಮನವಮಿ: ಭೀಮನಾಳ ಮತ್ತು ಭೀಮನಾಳ ತಾಂಡಾ ಜನತೆಗೆ ರಾಮನವಮಿ ಡಬಲ್ ಖುಷಿ ನೀಡಿದೆ. ಸ್ವಾತಂತ್ರ್ಯ ಸಿಕ್ಕಾಗಿನಿಂದ ಬಸ್ ಕಾಣದ ಜನರಿಗೆ ಸಾರಿಗೆ ಸೇವೆ ಆರಂಭವಾಗಿದ್ದರಿಂದ ಇಡೀ ಊರಿನಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಹಳ್ಳಿಗೆ ಬಂದ ಬಸ್‌ಗೆ ತಳೀರು ತೋರಣ ಕಟ್ಟಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಚಾಲಕ- ನಿರ್ವಾಹಕರನ್ನು ಸನ್ಮಾನಿಸಲಾಯಿತು. ಪಟಾಕಿ ಸಿಡಿಸಿ ಇಡೀ ಊರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಶಾಸಕ ಮತ್ತಿಮಡು ಸ್ಪಂದನೆ: ಭೀಮನಾಳ ಗ್ರಾಮಕ್ಕೆ ಬಸ್ ಸಂಚಾರ ಇಲ್ಲದಿರುವ ಕುರಿತು ವಿಜಯವಾಣಿ ವರದಿ ಪ್ರಕಟಿಸಿರುವುದನ್ನು ಗಮನಿಸಿದ ಶಾಸಕ ಬಸವರಾಜ ಮತ್ತಿಮಡು, ಕೂಡಲೇ ಸಾರಿಗೆ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಶೀಘ್ರದಲ್ಲಿ ಬಸ್ ವ್ಯವಸ್ಥೆ ಮಾಡುವ ಮೂಲಕ ಜನ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದ್ದು ಫಲ ನೀಡಿದೆ.

ವಿಜಯವಾಣಿ ಕಾರ್ಯಕ್ಕೆ ಮೆಚ್ಚುಗೆ: ಬಸ್ ಕಾಣದ ಊರಿಗೆ ಸೇವೆ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ವಿಜಯವಾಣಿ ತಂಡಕ್ಕೆ ಭೀಮನಾಳ ಹಾಗೂ ಭೀಮನಾಳ ತಾಂಡಾ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶಾಲೆ-ಕಾಲೇಜು ವಿದ್ಯಾರ್ಥಿಗಳು ವಿಶೇಷ ಧನ್ಯಾವಾದ ಹೇಳಿದ್ದಾರೆ. ನಮ್ಮ ಮನವಿಗೆ ಸ್ಪಂದಿಸದ ಅಧಿಕಾರಿಗಳು ನಿಮ್ಮದೊಂದು ವರದಿಗೆ ಸ್ಪಂದಿಸಿದ್ದಾರೆ. ಸಮಸ್ಯೆಗೆ ಧ್ವನಿಯಾಗುವ ಮೂಲಕ ನಿಜವಾಗಿಯೂ ಕನ್ನಡಿಗರ ಧ್ವನಿ ಎಂಬುದನ್ನು ವಿಜಯವಾಣಿ ಸಾಬೀತುಪಡಿಸಿದೆ ಎಂದು ಸ್ಥಳೀಯರು ಕೊಂಡಾಡಿದ್ದಾರೆ.

ನಮ್ಮೂರಿಗೆ ಇಲ್ಲಿವರೆಗೂ ಬಸ್ ಬಂದಿರಲಿಲ್ಲ. ಹೀಗಾಗಿ ನಿತ್ಯವೂ ಎರಡು ಕಿಮೀ ನಡೆದುಕೊಂಡು ಹೋಗಿ ಬಸ್ ಹತ್ತಿ ಶಾಲೆಗೆ ಹೋಗುತ್ತಿದ್ದೆವು. ಇದರಿಂದ ಸಾಕಷ್ಟು ಆಯಾಸ ಆಗುತ್ತಿತ್ತು. ವಿಜಯವಾಣಿ ಪತ್ರಿಕೆ ಸಮಸ್ಯೆ ಬಗ್ಗೆ ಮೇಲೆ ಬೆಳಕು ಚೆಲ್ಲಿ ನಮ್ಮೂರಿಗೆ ಬಸ್ ಸೇವೆ ಕಲ್ಪಿಸಿದೆ. ಪತ್ರಿಕೆ ಜನಪರ ಕಾಳಜಿಗೆ ಹ್ಯಾಟ್ಸಾಫ್.

| ಪ್ರಿಯಾಂಕಾ ವಿದ್ಯಾರ್ಥಿನಿ, ಸರ್ಕಾರಿ ಕನ್ಯಾ ಪ್ರೌಢಶಾಲೆ ಕಮಲಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net