ಅಂತೂ ಪೂರ್ಣಗೊಂಡಿತು ಡಾಂಬರೀಕರಣ

kls road
ಕುದುರೆಮುಖ ರಸ್ತೆಗೆ ರಾತ್ರಿ ಡಾಂಬರೀಕರಣ ಮಾಡುತ್ತಿರುವುದು.
Published on

ಕಳಸ: ಮೂರು ವರ್ಷಗಳಿಂದ ಕುಂಟುತ್ತ ಸಾಗಿದ ಕುದುರೆಮುಖ ರಾಜ್ಯ ಹೆದ್ದಾರಿಯ ಆಯ್ದ ಭಾಗದ ಕಾಮಗಾರಿಯನ್ನು ಗ್ರಾಮಸ್ಥರು ಪೊಲೀಸರ ಮೊರೆ ಹೋಗಿ ಪೂರ್ಣಗೊಳಿಸಿಕೊಂಡಿದ್ದಾರೆ.

ಮೂರು ವರ್ಷಗಳ ಹಿಂದೆ ಕುದುರೆಮುಖ-ಕೆಂಗನಕೊಂಡವರೆಗಿನ ಆಯ್ದ ಭಾಗದ ಎಂಟು ಕಿ.ಮೀ ಡಾಂಬರೀಕರಣ ಆರಂಭಗೊಂಡಿತ್ತು. ಆದರೆ ಮೂರು ವರ್ಷಗಳಿಂದ ಎಂಟು ಕಿ.ಮೀ ಡಾಂಬರೀಕರಣದ ಕಾಮಗಾರಿ ಕುಂಟುತ್ತ ಸಾಗಿತ್ತು. ಈ ಹಿಂದೆ ನಡೆದ ಪ್ರತಿಭಟನೆಯ ನಂತರ ಒಂದು ವಾರದಿಂದ ಎರಡು ಕಿಮೀ ದೂರದ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಆದರೆ ಪ್ರಾರಂಭದಲ್ಲಿಯೇ ಯಂತ್ರಗಳು ಹಾಳಾಗಿ ತಣ್ಣಗಾದ ಡಾಂಬರ್ ಮಿಶ್ರಣವನ್ನು ರಸ್ತೆಗೆ ಹಾಕಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಡಾಂಬರನ್ನು ಕೀಳಿಸಿ ಮರು ಡಾಂಬರೀಕರಣ ಮಾಡಿಸಲಾಗಿತ್ತು. ಇದಾದ ಒಂದೇ ದಿನದಲ್ಲಿ ಕಾಮಗಾರಿ ಮುಗಿಸದೆ ಲೇಬರ್ ಕಾಂಟ್ರಾೃಕ್ಟರ್ ಕಾಮಗಾರಿಯ ಯಂತ್ರಗಳನ್ನು ಸಾಗಿಸಲು ಮುಂದಾಗಿದ್ದರು. ಇದನ್ನು ತಡೆದ ಗ್ರಾಮಸ್ಥರು ಕಾಮಗಾರಿ ಮುಗಿಸದೆ ಯಾವುದೇ ಯಂತ್ರಗಳನ್ನು ತೆಗೆದುಕೊಂಡು ಹೋಗಬಾರದು ಎಂದು ತಾಕೀತು ಮಾಡಿದರು. ಹೀಗಾಗಿ ಗುತ್ತಿಗೆದಾರ ಕಾಮಗಾರಿಯನ್ನು ಮುಂದುವರಿಸಿದರು. ಆದರೆ ಅದೇ ದಿನ ಮತ್ತೆ ಯಂತ್ರ ಹಾಳಾಗಿದ್ದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಆದರೆ ಯಾವುದೇ ಕಾರಣಕ್ಕೂ ಡಾಂಬರೀಕರಣ ಸಂಪೂರ್ಣವಾಗದೆ ಇಲ್ಲಿಂದ ಹೋಗಬಾರದೆಂದು ತಾಕೀತು ಮಾಡಿದರು. ನಂತರ ಮತ್ತೆ ಕಾಮಗಾರಿ ಪ್ರಾರಂಭವಾಗಿತ್ತು. ಇನ್ನೇನು 100 ಮೀ. ರಸ್ತೆ ಕಾಮಗಾರಿ ಉಳಿದಿದೆ ಎನ್ನುವಾಗ ಮತ್ತೆ ಕಾಮಗಾರಿ ಸ್ಥಗಿತ ಮಾಡಿ ಯಂತ್ರಗಳನ್ನು ವಾಪಸ್ ಸಾಗಿಸಲು ಲೇಬರ್ ಕಾಂಟ್ರಾೃಕ್ಟರ್ ಮುಂದಾಗಿದ್ದರು. ಈ ಸಂದರ್ಭದಲ್ಲಿ ಕರವೇ ನೆಲ್ಲಿಬೀಡು ಮತ್ತು ರೈತ ಸಂಘ ಕುದುರೆಮುಖದ ಸದಸ್ಯರು ಕುದುರೆಮುಖ ಪೊಲೀಸ್ ಠಾಣೆಗೆ ದೂರು ನೀಡಿದರು. ಕುದುರೆಮುಖ ಪೊಲೀಸರು ಲೇಬರ್ ಕಾಂಟ್ರಾೃಕ್ಟರ್‌ನನ್ನು ಠಾಣೆಗೆ ಕರೆಸಿ ಕಾಮಗಾರಿ ಸಂಪೂರ್ಣಗೊಳಿಸುವಂತೆ ಸೂಚಿಸಿದರು.

ಲೇಬರ್ ಕಾಂಟ್ರಾೃಕ್ಟರ್ ಮತ್ತು ಯಂತ್ರಗಳ ಮಾಲೀಕ ಇಬ್ಬರೂ ಸೇರಿ ಸ್ವಂತ ಖರ್ಚಿನಲ್ಲಿ ಡಾಂಬರು ಮಿಕ್ಸಿಂಗ್ ತರಿಸಿ 100 ಮೀ. ರಸ್ತೆ ಡಾಂಬರೀಕರಣ ಮುಗಿಸಿ ಯಂತ್ರಗಳನ್ನು ತೆಗೆದುಕೊಂಡು ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net