ಅಂತಾರಾಷ್ಟ್ರೀಯ ಮಟ್ಟದಲ್ಲೂ ಕನ್ನಡ ಭಾಷೆ ಛಾಪು

gpt Kannada
Published on

 ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಪ್ರಶಂಸೆ

ಗುಂಡ್ಲುಪೇಟೆ : ಕನ್ನಡ ಭಾಷೆ ಸ್ಥಳೀಯ ಮಟ್ಟ ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನ ಛಾಪು ಒತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ತಿಳಿಸಿದರು. ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಇಲ್ಲಿನ ಡಿ. ದೇವರಾಜು ಅರಸು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ರಂಗದ ಗಣ್ಯರನ್ನು ಗೌರವಿಸಿ ಅವರು ಮಾತನಾಡಿದರು.

ಗುಂಡ್ಲುಪೇಟೆ ತಾಲೂಕು ವಿಶೇಷವಾಗಿ ಕೇರಳ, ತಮಿಳುನಾಡು ಗಡಿ ಹಂಚಿಕೊಂಡು ಹಲವು ವಿಶೇಷತೆಗಳನ್ನು ಮೈಗೂಡಿಸಿಕೊಂಡ ಪ್ರದೇಶವಾಗಿದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತಮಿಳು ಸಂಘ ಸೇರಿದಂತೆ ವಿವಿಧ ಸಂಘ ಸಂಘಟನೆಗಳು ಕೈ ಜೋಡಿಸಿ ಗಡಿ ತಾಲೂಕಿನಲ್ಲಿ ಕನ್ನಡದ ಕಂಪನ್ನು ಬೆಳಗಿಸಲಾಗುತ್ತಿದೆ. ಕನ್ನಡ ಭಾಷೆ ನೆಲ ಜಲ ಅದ್ಭುತಗಳನ್ನು ಹಲವು ಕವಿಗಳು, ಸಾಹಿತಿಗಳು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿ ನಾಡು ನುಡಿಯ ಬಗ್ಗೆ ವಿಶ್ವ ಮಟ್ಟದಲ್ಲಿ ಗೌರವವನ್ನು ಹೆಚ್ಚಿಸಿರುವುದು

ಹೆಮ್ಮೆಯ ಸಂಗತಿ ಎಂದರು. ಪ್ರತಿಯೊಬ್ಬರಲ್ಲೂ ಭಾಷಾಭಿಮಾನ ಮೂಡಬೇಕು. ಅದು ಕೇವಲ ಮಾತಿಗೆ ಸೀಮಿತವಾಗದೆ ಎಲ್ಲಾ ಕ್ಷೇತ್ರದಲ್ಲೂ ಭಾಷೆಗೆ ಪ್ರಾಮುಖ್ಯತೆ ನೀಡುವ ಕೆಲಸವಾಗಬೇಕು ಎಂದರು.

ಕ್ಷೇತ್ರಕ್ಕೆ ಈಗಾಗಲೇ ವಿಶೇಷ ಅನುದಾನ ತರುವ ಮೂಲಕ ಬೇಗೂರಿನ ಹತ್ತಿ ಮಾರುಕಟ್ಟೆ, ವಸತಿ ಶಾಲೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಗಡಿ ತಾಲೂಕನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಸಂಕಲ್ಪ ಮಾಡಲಾಗಿದೆ. ದೇವರಾಜ ಅರಸು ಕ್ರೀಡಾಂಗಣದ ಸುತ್ತು ಗೋಡೆ ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದ್ದು, ಇದನ್ನು ಮಾದರಿ ಸ್ಟೇಡಿಯಂ ಮಾಡಲಾಗುವುದು ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಪಟ್ಟಣದ ವಿವಿಧ ಶಾಲೆ ವಿದ್ಯಾರ್ಥಿಗಳಿಂದ ಕನ್ನಡ ನಾಡು, ನುಡಿ ಬಗೆಗಿನ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನೀಡಿ ರಂಜಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ಸ್ವಾಮಿ, ಸರ್ಕಲ್ ಇನ್ಸ್ ಪೆಕ್ಟರ್ ಪರಶಿವಮೂರ್ತಿ, ಪುರಸಭಾಧ್ಯಕ್ಷ ಕಿರಣ್ ಗೌಡ, ಮುಖ್ಯಾಧಿಕಾರಿ ವಸಂತ ಕುಮಾರಿ, ಸಿಡಿಪಿಒ ಹೇಮಾವತಿ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net