

ಬಸವಕಲ್ಯಾಣ: ಅಂತಾರಾಜ್ಯ ಸಮಸ್ಯೆ ನೀಗಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ನೀತಿ ಜಾರಿಗೊಳಿಸುವ ಅಗತ್ಯವಿದೆ ಎಂದು ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಜಾನಪದ ವಿದ್ವಾಂಸ ನಾಡೋಜ ಡಾ.ಗೊ.ರು. ಚನ್ನಬಸಪ್ಪ ಹೇಳಿದರು.
ಬಿಕೆಡಿಬಿ ಅತಿಥಿ ಗೃಹದಲ್ಲಿ ಡಾ.ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನ ಶನಿವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ಕರ್ನಾಟಕ ಏಕೀಕರಣವಾಗಿ ಅದೆಷ್ಟೋ ವರ್ಷಗಳಾಗಿವೆ. ಇತ್ಯರ್ಥವಾಗದ ಗಡಿ, ನೀರಿನ ಸಮಸ್ಯೆ ಹಾಗೆಯೇ ಉಳಿದಿದ್ದು, ಪರಿಹಾರ ಕಲ್ಪಿಸುವಂಥ ರಾಷ್ಟ್ರೀಯ ನೀತಿ ಬೇಕಿದೆ ಎಂದರು.
ಕನ್ನಡ ನಾಡಿಗೆ ವಲಸಿಗರು ಬರುವುದು ಹಾಗೂ ಕನ್ನಡ ಕಲಿಯದಿರುವುದು ಒಂದೆಡೆಯಾದರೆ, ಕನ್ನಡಿಗರಲ್ಲಿರುವ ನಿರಭಿಮಾನದಿಂದ ಕನ್ನಡಕ್ಕೆ ಹೆಚ್ಚು ಸಮಸ್ಯೆ ಎದುರಾಗಿದೆ. ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ಉದ್ಯೋಗಾವಕಾಶ ಸದ್ಯ ಬಹುದೊಡ್ಡ ಪ್ರಶ್ನೆಯಾಗಿದೆ. ಕನ್ನಡ ಭಾಷೆ ಮತ್ತು ಕನ್ನಡಿಗರ ಸವಾಲುಗಳ ಕುರಿತ ಹಲವಾರು ವರದಿ ಮತ್ತು ಶಿಫಾರಸು ಸರ್ಕಾರದಲ್ಲಿ ಅಂಗೀಕೃತವಾಗಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಷ್ಠಾನದ ನಿರ್ದೇಶಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ೧೯೭೪ರಲ್ಲಿ ಡಾ.ಜಯದೇವಿ ತಾಯಿ ಲಿಗಾಡೆ ಅವರು ಮಂಡ್ಯದಲ್ಲಿ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಈಗ ೨೦೨೪ರಲ್ಲಿ ಗೊರುಚ ಅಲ್ಲೇ ಸಮ್ಮೇಳನದ ಅಧ್ಯಕ್ಷರಾಗಿರುವುದು ಹೆಮ್ಮೆಯ ಸಂಗತಿ. ಈ ನೆಲದ ಅಸ್ಮಿತೆಗಾಗಿ ದುಡಿದ ಈ ಇಬ್ಬರೂ ಮಹಾನ್ ಚೇತನರು ಎಂದು ಬಣ್ಣಿಸಿದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಹಿರಿಯ ವಿದ್ವಾಂಸ ಡಾ.ವೀರಣ್ಣ ರಾಜೂರ, ನಿವೃತ್ತ ಪ್ರಾಧ್ಯಾಪಕಿ ಪ್ರೊ.ಜಯಶ್ರೀ ದಂಡೆ, ಹಿರಿಯ ಸಾಹಿತಿ ಡಾ.ಕಾಶೀನಾಥ ಅಂಬಲಗೆ, ಯೋಗೇಶ ಮಾಸ್ಟರ್, ಅಶೋಕ ದ್ಯಾಮ್ಲೂರು, ಶಿವರಾಜ ನರಶೆಟ್ಟಿ, ಪ್ರತಿಷ್ಠಾನ ಅಧ್ಯಕ್ಷ ಶ್ರೀಶೈಲ ಹುಡೇದ, ಧರ್ಮಣ್ಣ ಚಿತ್ತಾ, ರಾಜಶೇಖರ ಬಿರಾದಾರ, ಮಹಾದೇವಪ್ಪ ಇಜಾರೆ, ಡಾ.ಬಾಬಾಸಾಹೇಬ ಗಡ್ಡೆ, ನಾಗರಾಜ ಮಾನೆ, ಕಲ್ಯಾಣರಾವ ಮದರಗಾಂವಕರ, ಧನರಾಜ ರಾಜೋಳೆ ಇತರರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ಸ್ವಾಗತಿಸಿದರು. ಚಂದ್ರಕಾಂತ ಅಕ್ಕಣ್ಣ ವಂದಿಸಿದರು.
ಲೇಖಕ ಕೇಂದ್ರಿತ ವಿಮರ್ಶೆಗಿಂತ ಕೃತಿ ಕೇಂದ್ರಿತ ಹಾಗೂ ವಸ್ತುನಿಷ್ಠ ವಿಮರ್ಶೆ ಮುಖ್ಯ. ವಿಮರ್ಶೆಯಲ್ಲಿ ಹಲವು ಪಂಥಗಳು ಬೆಳೆದಿವೆ. ವಿಮರ್ಶಾ ಮಾರ್ಗಗಳ ಹಿನ್ನೆಲೆಯಲ್ಲಿ ಕೃತಿ ಅಧ್ಯಯನ ನಡೆದರೆ ಒಂದು ಚೌಕಟ್ಟು ಬಂದುಬಿಡುತ್ತದೆ. ವಿಮರ್ಶೆ ಎಂದಿಗೂ ಮುಕ್ತವಾಗಿ ಬರೆಯಬೇಕು.
| ನಾಡೋಜ ಗೊ.ರು. ಚನ್ನಬಸಪ್ಪ ಹಿರಿಯ ಜಾನಪದ ವಿದ್ವಾಂಸ